

ತೀರ್ಥಹಳ್ಳಿ: ವಿಜಯದಶಮಿಯಂದು ಏರ್ಪಡಿಸಿದ್ದ ಶ್ರೀ ರಾಮೇಶ್ವರ ದೇವರ ರಾಜಬೀದಿ ಉತ್ಸವ ಹಾಗೂ ಭುವನೇಶ್ವರಿ ದೇವಿ ದಸರಾ ಮೆರವಣಿಗೆ ವಿವಿಧ ಜಾನಪದ ಕಲಾತಂಡಗಳ ವೈಭವದೊಂದಿಗೆ ಪಟ್ಟಣದಲ್ಲಿ ಅದ್ಧೂರಿಯಾಗಿ ಸಂಪನ್ನಗೊಂಡಿತು.
ಎಡೆಬಿಡದೆ ಮಳೆ ಸುರಿಯುತ್ತಿತ್ತು. ಮಧ್ಯಾಹ್ನ 3.30ಕ್ಕೆ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಶಾಸಕ ಆರಗ ಜ್ಞಾನೇಂದ್ರ ಭುವನೇಶ್ವರಿ ದೇವಿ ಪ್ರತಿಮೆಗೆ ಹಾರ ಹಾಕುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಡೊಳ್ಳು, ವಿವಿಧ ಧಾರ್ಮಿಕ ಸ್ಥಬ್ಧಚಿತ್ರಗಳು ಆಕರ್ಷಕವಾಗಿದ್ದವು. ಇವುಗಳಲ್ಲಿ ಬ್ರಹ್ಮೋಸ್ ಕ್ಷಿಪಣಿ ಗಮನ ಸೆಳೆಯಿತು.
ಮೆರವಣಿಗೆ ನಂತರ ಕುಶಾವತಿಯ ನೆಹರು ಪಾರ್ಕ್‌ನಲ್ಲಿರುವ ಬನ್ನಿ ಮುಡಿಯಲಾಯಿತು. ಸಭಾ ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರದ ಗಣ್ಯರನ್ನು ಗೌರವಿಸಲಾಯಿತು. ಮನರಂಜನಾ ಕಾರ್ಯಕ್ರಮದ ನಂತರ ಏರ್ಪಡಿಸಿದ್ದ ಹುಲಿ ವೇಷದ ಸ್ಪರ್ಧೆ ಆಕರ್ಷಣೀಯವಾಗಿತ್ತು.