ವೃದ್ಧರ ತಾಣವಾಗುತ್ತಿದೆ ಗ್ರಾಮೀಣ ಭಾಗ

16sgr4
ಸಾಗರದಲ್ಲಿ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಿದ್ದ ವಧು-ವರರ ಸಮಾವೇಶವನ್ನು ಸ್ತ್ರೀರೋಗ ತಜ್ಞೆ ಡಾ. ನಳಿನಾ ಭಾಗವತ್ ಉದ್ಘಾಟಿಸಿದರು. ಆದಿತ್ಯ ಹೆಗಡೆ ಕಲಗಾರು, ರಾಜೇಂದ್ರಪ್ರಸಾದ್ ಭಟ್, ಕೃಷ್ಣಮೂರ್ತಿ ಹೆಗಡೆ ಇತರರಿದ್ದರು.
Published on

ಸಾಗರ: ಬಹುತೇಕ ಯುವತಿಯರು ವಿವಾಹವಾಗಲು ನಗರದಲ್ಲಿ ಉದ್ಯೋಗದಲ್ಲಿರುವ ಯುವಕರು ಬೇಕು ಎಂಬ ಮನಸ್ಥಿತಿ ಬೆಳೆಸಿಕೊಂಡಿರುವುದು ಸದ್ಯ ಹವ್ಯಕ ಸಮಾಜ ಎದುರಿಸುತ್ತಿರುವ ಸಂಕಟ ಎಂದು ಸ್ತ್ರೀರೋಗ ತಜ್ಞೆ ಡಾ. ನಳಿನಾ ಆರ್. ಭಾಗವತ್ ಹೇಳಿದರು.

ನಗರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಶ್ರೀ ಅಖಿಲ ಹವ್ಯಕ ಮಹಾಸಭಾದಿಂದ ಆಯೋಜಿಸಿದ್ದ ಋಣಾನುಬಂಧ ಹವ್ಯಕ ವಧು-ವರರ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪಟ್ಟಣದಲ್ಲಿ ಸಣ್ಣ ಉದ್ಯೋಗವಾದರೂ ಸರಿ ತಾನು ವಿವಾಹವಾಗುವ ಯುವಕ ನಗರಗಳಲ್ಲಿ ಇರಬೇಕು ಎನ್ನುತ್ತಾರೆ. ಅವರಿಗೆ ಮಾವ, ಅತ್ತೆ ಜವಾಬ್ದಾರಿ ಬೇಡವಾಗಿದೆ. ಇದರಿಂದ ಗ್ರಾಮೀಣ ಭಾಗದ ಕುಟುಂಬದಲ್ಲಿ ವೃದ್ಧರು ಮಾತ್ರ ಉಳಿಯುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಇಂದು ಯುವಕರಿಗೆ ವಧುವಿನ ಕೊರತೆ ಕಾಡುತ್ತಿದೆ. ಕೆಲವರು ವಯಸ್ಸು ಮೀರುತ್ತಿದ್ದಾರೆ. ಉತ್ತಮ ಸಂಗಾತಿ ಸಿಗಬೇಕೆಂದು ಇಬ್ಬರೂ ಬಯಸುತ್ತಾರೆ. ವಿವಾಹ ಒಂದು ಋಣಾನುಬಂಧ. ವಧು-ವರರು ಜೀವನಪರ್ಯಂತ ಸುಖವಾಗಿರಬೇಕು. ತನಗೆ ಸಿಗುವ ಸಂಗಾತಿ ಹೇಗೆ ಇರುತ್ತಾಳೋ ಎಂಬ ಕಾತರ ಇರುತ್ತದೆ. ತನಗೆ ಎಂತಹ ಸೊಸೆ ಸಿಗುತ್ತಾಳೋ ಎಂಬ ಕುತೂಹಲವೂ ಪಾಲಕರಿಗೆ ಇರುತ್ತದೆ ಎಂದರು.

ಹವ್ಯಕ ಮಹಾಸಭಾ ಕಾರ್ಯದರ್ಶಿ ಆದಿತ್ಯ ಹೆಗಡೆ ಕಲಗಾರು ಮಾತನಾಡಿ, ಹವ್ಯಕ ಸಮಾಜದಲ್ಲಿ ವಿವಾಹ ಸಮಸ್ಯೆ ಗಂಭೀರವಾಗಿದೆ. ಗ್ರಾಮೀಣ ಭಾಗದಲ್ಲಿ ಕೃಷಿ ಬಿಟ್ಟರೆ ಬೇರೆ ಆದಾಯ ಮೂಲಗಳಿಲ್ಲ. ಗ್ರಾಮೀಣ ಭಾಗದಲ್ಲಿ ಕೈಗಾರಿಕೆ ಘಟಕಗಳು ಸ್ಥಾಪನೆಯಾದರೆ ಮಕ್ಕಳು ಸ್ಥಳೀಯವಾಗಿ ವಾಸವಿರುತ್ತಾರೆ ಎಂದು ಹೇಳಿದರು.

ಹವ್ಯಕ ಸಮಾಜದ ಸಂಸ್ಕಾರ, ಆಚಾರ, ವಿಚಾರ, ಪರಂಪರೆಯನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಬೇಕು. ವಿವಿಧ ಪ್ರಾಂತ್ಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ವರ್ಷ 25 ಲಕ್ಷ ರೂ. ಪ್ರೋತ್ಸಾಹಧನ ನೀಡಲಾಗಿದೆ. ಆದಿತ್ಯ ಹೆಗಡೆ ಕಲಗಾರು ಹವ್ಯಕ ಮಹಾಸಭಾ ಕಾರ್ಯದರ್ಶಿ

ಶಿರಸಿಯ ಟಿಎಸ್‌ಎಸ್ ಮತ್ತು ಟಿಎಂಎಸ್ ಸಂಸ್ಥೆಯಿಂದ ಉದ್ಯೋಗ ಪಡೆದು ನೂರಾರು ಯುವಕ-ಯುವತಿಯರು ಗ್ರಾಮೀಣ ಭಾಗದಲ್ಲೇ ಉಳಿಯುವಂತಾಗಿದೆ. ಇಂತಹ ಬೆಳವಣಿಗೆ ಸಾಗರದಲ್ಲೂ ಆಗಬೇಕು. ಸರ್ಕಾರಿ ನೌಕರಿ ಎಲ್ಲರಿಗೂ ಸಿಗಲು ಸಾಧ್ಯವಿಲ್ಲ. ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡರೆ ಯಶಸ್ಸು ಕಾಣಬಹುದು. ಹಲವರಿಗೆ ಉದ್ಯೋಗ ದೊರಕಿಸಬಹುದು ಎಂದು ತಿಳಿಸಿದರು.

ತ್ರಿಮತಸ್ಥ ಬ್ರಾಹ್ಮಣ ಅರ್ಚಕರು ಮತ್ತು ಪುರೋಹಿತರ ಪರಿಷತ್ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್, ಋಣಾನುಬಂಧ ಕಾರ್ಯಕ್ರಮ ಸಂಚಾಲಕ ಕೃಷ್ಣಮೂರ್ತಿ ಹೆಗಡೆ, ಮಂಜುನಾಥ ಹೆಗಡೆ, ಅಖಿಲ ಹವ್ಯಕ ಮಹಾಸಭಾ ನಿರ್ದೇಶಕ ಕೆ.ಎನ್.ಶ್ರೀಧರ್, ಗುರುಪಾದ, ನಿರ್ದೇಶಕ ಹು.ಭಾ.ಅಶೋಕ, ರಾಜಲಕ್ಷ್ಮೀ, ಮೇಘಾ ಜಿ. ಪ್ರಸಾದ್, ರಮಾದೇವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net