ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿ

26bdvt2
ಭದ್ರಾವತಿ ಹೊಸಸಿದ್ದಾಪುರದಲ್ಲಿ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಶ್ರೀ ಪ್ರಸನ್ನನಾಥ ಸ್ವಾಮೀಜಿ, ಕಾ.ಪಿ.ದೊರೈ, ಪ್ರಭಾಕರ ಬೀರಯ್ಯ, ಡಿ.ಸಿ.ಮಾಯಣ್ಣ ಇತರರಿದ್ದರು.
Published on

ಭದ್ರಾವತಿ: ಪ್ರತಿ ವಿದ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿ, ಪ್ರೋತ್ಸಾಹಿಸುವ ಕೆಲಸವನ್ನು ಶಿಕ್ಷಣ ಸಂಸ್ಥೆಗಳು ಮಾಡಬೇಕು ಎಂದು ಬೆಕ್ಕಿನಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು.

ನಗರದ ಹೊಸಸಿದ್ದಾಪುರದಲ್ಲಿ ಸಹ್ಯಾದ್ರಿ ಪಬ್ಲಿಕ್ ಸ್ಕೂಲ್‌ನ ನೂತನ ಕಟ್ಟಡ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಕ್ಕಳನ್ನು ಸರಿದಾರಿಯಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಇಲ್ಲದಿದ್ದರೆ ತಪ್ಪುದಾರಿಯಲ್ಲಿ ಸಾಗಿ ಸಮಾಜಕ್ಕೆ ಕಂಟಕವಾಗುತ್ತಾರೆ ಎಂದು ತಿಳಿಸಿದರು.

ಶಿಕ್ಷಣ ಪಡೆದರೆ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಕಲ್ಪನೆ ಪಾಲಕರಲ್ಲಿದೆ. ಶಿಕ್ಷಣದ ಜತೆಯಲ್ಲಿ ಸಂಸ್ಕಾರ ಕಲಿಸುವುದು ಸಹ ಮುಖ್ಯ ಎಂಬುದನ್ನು ಅರಿತುಕೊಳ್ಳಬೇಕು. ಶಿಕ್ಷಣ ಸಂಸ್ಥೆಗಳು ಸಮಾಜಕ್ಕೆ ಉಪಯುಕ್ತ ಸಂದೇಶ ನೀಡುವಂತಾಗಬೇಕು ಎಂದರು.

ನೂತನ ಶಾಲೆ ಉದ್ಘಾಟಿಸಿ ಮಾತನಾಡಿದ ಆದಿಚುಂಚನಗಿರಿ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಯು ಉತ್ತಮ ಶಿಕ್ಷಣ ಒದಗಿಸುವಲ್ಲಿ ಮಂಚೂಣಿಯಲ್ಲಿದೆ. ಮಕ್ಕಳಿಗೆ ಶಿಕ್ಷಣದ ಜತೆಯಲ್ಲಿ ಸಂಸ್ಕೃತಿ ಪರಂಪರೆಯ ಅರಿವು ಸಹ ತಿಳಿಸಿಕೊಡುವ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ಕಾನೂನುಗಳು ಎಲ್ಲ ಶಾಲೆಗಳಿಗೂ ಒಂದೇ ರೀತಿ ಇರಬೇಕು. ಆದರೆ ನಮ್ಮಲ್ಲಿ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಬೇರೆ ಬೇರೆ ನೀತಿ ಪಾಲಿಸಲಾಗುತ್ತಿದೆ. ಕಟ್ಟಡ ಸುರಕ್ಷತೆ, ಅಗ್ನಿ ಅವಘಡ ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮ ಸೇರಿ ಅನೇಕ ನಿಯಮಗಳನ್ನು ಖಾಸಗಿ ಶಾಲೆಗಳಿಗೆ ಪಾಲಿಸಲು ಸೂಚಿಸುವ ಸರ್ಕಾರವೇ ಸರ್ಕಾರಿ ಶಾಲೆಗಳಲ್ಲಿ ಅವುಗಳನ್ನು ಪಾಲಿಸುವುದಿಲ್ಲ ಎಂದರು.

ಸಹ್ಯಾದ್ರಿ ಎಜುಕೇಷನ್ ಟ್ರಸ್ಟ್ ಅಧ್ಯಕ್ಷ ಕಾ.ಪಿ.ದೊರೈ, ತಾಲೂಕು ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಪ್ರಭಾಕರ ಬೀರಯ್ಯ, ಕಾರ್ಮಿಕ ಮುಖಂಡ ಡಿ.ಸಿ.ಮಾಯಣ್ಣ, ನಗರಸಭೆ ಸದಸ್ಯೆ ನಾಗರತ್ನಾ, ಸಂಸ್ಥೆ ಕಾರ್ಯದರ್ಶಿ ಕಾಳೇಗೌಡ. ಎಚ್.ಬಿ.ರವಿಕುಮಾರ್, ಆಡಳಿತಾಧಿಕಾರಿ ಉಷಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net