ಶಿಕ್ಷಣ ವಂಚಿತರಿಗೆ ಅಗತ್ಯ ನೆರವು ಒದಗಿಸಿ

20 skp 1
ಶಿಕಾರಿಪುರದಲ್ಲಿ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದ ಉದ್ಘಾಟನೆಯಲ್ಲಿ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಎನ್.ವಿ.ಈರೇಶ್, ಲೋಕೇಶ್ವರಪ್ಪ, ಮಮತಾ, ಮಂಜುನಾಥ್ ಮತ್ತಿತರರಿದ್ದರು.
Published on

ಶಿಕಾರಿಪುರ: ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿಯಾದರೆ ದೇಶದ ಅಭಿವೃದ್ಧಿ ಸಾಧ್ಯ. ಹಾಗಾಗಿ ಶಿಕ್ಷಣ ವಂಚಿತರಿಗೆ ಅಗತ್ಯ ನೆರವು ಹಾಗೂ ಶಿಕ್ಷಣ ನೀಡುವ ವ್ಯವಸ್ಥೆ ಆಗಬೇಕು ಎಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಈಶ್ವರ್ ಫೌಂಡೇಷನ್‌ನಿಂದ ಏರ್ಪಡಿಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಕಾರ್ಯಾಗಾರದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಶಿಕ್ಷಣ ಪಡೆಯುವುದರಿಂದ ಹೊಸದಾಗಿ ಬದುಕು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ. ನಮ್ಮ ಕನಸುಗಳು ದೊಡ್ಡದಿರಬೇಕು. ಗುರಿ ಸಾಧಿಸಲು ನಿರಂತರ ಪರಿಶ್ರಮ ವಹಿಸಬೇಕು ಎಂದು ತಿಳಿಸಿದರು.

ಸಮಾಜದಲ್ಲಿ ಸಾಕಷ್ಟು ಜನರು ಪ್ರತಿಭಾವಂತರಿದ್ದು, ಅವರ ಪ್ರತಿಭೆ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗುತ್ತಿಲ್ಲ. ಅವಕಾಶಗಳು ಸಿಕ್ಕಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ. ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು.

ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ

ಬಸವಕೇಂದ್ರ, ಶಿವಮೊಗ್ಗ

ಈಶ್ವರ್ ಫೌಂಡೇಷನ್ ಮೂಲಕ ಎನ್.ವಿ.ಈರೇಶ್ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದ್ದು, ಧಾರ್ಮಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ವೀರಶೈವ ಲಿಂಗಾಯತ ಸಮಾಜವನ್ನು ಸಂಘಟಿಸಲು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಅವರ ಸೇವಾ ಭಾವನೆ ಇತರರಿಗೆ ಮಾದರಿ ಎಂದರು.

ಸಾಧನಾ ಅಕಾಡೆಮಿ ಮಂಜುನಾಥ್ ಮಾತನಾಡಿ, ನಮ್ಮ ಸಂಕಲ್ಪ ಶಕ್ತಿ ಗಟ್ಟಿಯಾಗಿರಬೇಕು. ಸಾಧಿಸುವ ಛಲ ಇರಬೇಕು. ಗ್ರಾಮಾಂತರ ಪ್ರದೇಶದ ಮಕ್ಕಳು ಹೆಚ್ಚಿನ ಪ್ರಯತ್ನ ಮಾಡಬೇಕು. ಪ್ರಯತ್ನ ಮತ್ತು ಪರಿಶ್ರಮದಿಂದ ಫಲ ದೊರೆಯುತ್ತದೆ ಎಂದು ಸಲಹೆ ನೀಡಿದರು.

ಬಿಇಒ ಲೋಕೇಶ್ವರಪ್ಪ ಮಾತನಾಡಿ, ಮಕ್ಕಳು ಐಎಎಸ್, ಐಪಿಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಲು ಕಾರ್ಯಾಗಾರಗಳು ಅಗತ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಿ ಉನ್ನತ ಹುದ್ದೆ ಅಲಂಕರಿಸಬೇಕು ಎಂದು ತಿಳಿಸಿದರು.

ಈಶ್ವರ್ ಫೌಂಡೇಷನ್ ಸಂಸ್ಥಾಪಕ ಎನ್.ವಿ.ಈರೇಶ್ ಮಾತನಾಡಿ, ಶಿಕ್ಷಣ ಮತ್ತು ವೃತ್ತಿ ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ನೆರವಾಗುವ ದೃಷ್ಟಿಯಿಂದ ಕಾರ್ಯಾಗಾರ ಆಯೋಜಿಸಲಾಗಿದೆ. ತಾಲೂಕಿನ ವಿದ್ಯಾರ್ಥಿಗಳು ಅತ್ಯುನ್ನತ ಹುದ್ದೆ ಅಲಂಕರಿಸಬೇಕು ಎಂದು ತಿಳಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾದ ಧಾರವಾಡದ ಗುರುರಾಜ್ ಬುಲಬುಲೆ, ಮಹೇಶ್ ಮಾಸಾಳ್, ಮಮತಾ ಈರೇಶ್, ಶೋಭಾ ಈಶ್ವರಪ್ಪ, ವೀಣಾ ಕಿರಣ್, ಸುವರ್ಣಾ ರವಿಕುಮಾರ್, ಕುಮಾರಸ್ವಾಮಿ ಹಿರೇಮಠ, ಗುರುದತ್ತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net