

ಸಾಗರ: ನಗರದ ಸ್ವಚ್ಛತೆ ಕಾಪಾಡುವಲ್ಲಿ ಪೌರಕಾರ್ಮಿಕ ಪಾತ್ರ ಅಪಾರ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ನಗರಸಭೆ ರಂಗಮಂದಿರದಲ್ಲಿ ನಗರಸಭೆ ಹಾಗೂ ಪೌರಸೇವಾ ನೌಕರರ ಸಂಘದಿಂದ ಆಯೋಜಿಸಿದ್ದ ಪೌರಸೇವಾ ನೌಕರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪೌರಕಾರ್ಮಿಕರ ಸೇವೆಯನ್ನು ಸದಾ ಸ್ಮರಿಸಿ ಗೌರವಿಸಬೇಕು. ಪರಿಶ್ರಮದಿಂದ ಕೆಲಸ ಮಾಡುವವರು ಪೌರಕಾರ್ಮಿಕರು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಪೌರಕಾರ್ಮಿಕರ ಶ್ರೆಯೋಭಿವೃದ್ಧಿಗೆ ವಿಶೇಷ ಕೆಲಸ ಮಾಡುತ್ತಿದೆ. ಪೌರಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಎಲ್ಲ ಸಹಕಾರವನ್ನು ನಗರಸಭೆ, ಸ್ಥಳೀಯ ಸಂಸ್ಥೆಗಳ ಮೂಲಕ ನೀಡುತ್ತಿದೆ. ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು. ಡಾ. ಬಿ.ಆರ್.ಅಂಬೇಡ್ಕರ್ ನೀಡಿರುವ ಸಂವಿಧಾನದ ಆಶಯದಂತೆ ಸಮಾನ ಹಕ್ಕು ಪಡೆದು ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಪೌರಕಾರ್ಮಿಕರ ಸ್ವಚ್ಛತಾ ಸೇವೆಯ ಮಹತ್ವ ಜನರಿಗೆ ಅರ್ಥವಾಗಿದೆ. ನಗರಸಭೆ ಪೌರಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಎಲ್ಲ ಹೋರಾಟಕ್ಕೂ ಸಹಕಾರ ನೀಡುತ್ತಿದೆ. ಪೌರ ಕಾರ್ಮಿಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಸಂಕಲ್ಪ ಕೈಗೊಳ್ಳಬೇಕು ಎಂದು ತಿಳಿಸಿದರು.
ಹಿರಿಯ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್, ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಪ್ರಮುಖರಾದ ಮಧುಮಾಲತಿ, ಗಣಪತಿ ಮಂಡಗಳಲೆ, ಚಂದ್ರಪ್ಪ, ರವಿಕುಮಾರ್, ಮಧುರಾ ಶಿವಾನಂದ್, ನಾದಿರಾ ಪರ್ವಿನ್, ಲಲಿತಮ್ಮ, ಜಾಕೀರ್, ಪೌರಾಯುಕ್ತ ಎಚ್.ಕೆ.ನಾಗಪ್ಪ, ಹರೀಶ್ ಇತರರಿದ್ದರು.