ಜಲಮೂಲಗಳ ರಕ್ಷಣೆ ಎಲ್ಲರ ಹೊಣೆ

11 skp 5
ಶಿಕಾರಿಪುರದಲ್ಲಿ ಆಯೋಜಿಸಿದ್ದ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ತಹಸೀಲ್ದಾರ್ ಮಂಜುಳಾ ಶಂಕರ ಭಜಂತ್ರಿ, ಡಾ. ರವಿ, ರವೀಂದ್ರ ನಾಯಕ್, ಎನ್.ಜಿ.ನಾಗರಾಜ್ ಇತರರಿದ್ದರು.
Published on

ಶಿಕಾರಿಪುರ: ಪ್ರಕೃತಿ ಹೊರತಾಗಿ ನಮ್ಮ ಬದುಕಿಲ್ಲ. ನಮಗೆ ಉಸಿರು, ಹಸಿರು ಮತ್ತು ಸಮೃದ್ಧಿ ಕೊಟ್ಟವಳು ಪ್ರಕೃತಿ ಮಾತೆ. ಪರಿಸರ, ಕಾಡು, ಜಲಮೂಲ ಹಾಗೂ ಜೀವರಾಶಿಗಳನ್ನು ಉಳಿಸಿ ಬೆಳೆಸುವ ಹೊಣೆ ನಮ್ಮದು ಎಂದು ತಹಸೀಲ್ದಾರ್ ಮಂಜುಳಾ ಶಂಕರ ಭಜಂತ್ರಿ ಹೇಳಿದರು.

ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನದ ಪ್ರಯುಕ್ತ ಅರಣ್ಯ ಇಲಾಖೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹುತಾತ್ಮ ನೌಕರ ಬಸವಣ್ಣಪ್ಪ ಅವರ ಸ್ಮಾರಕಕ್ಕೆ ಗೌರವ ಸಮರ್ಪಿಸಿ ಮಾತನಾಡಿ, ಸಮೃದ್ಧ ಮಲೆನಾಡು ನಾಶವಾಗಿ ಬಯಲು ನಾಡಾಗಿದೆ. ನಾವು ಈಗಲೇ ಎಚ್ಚೆತ್ತುಕೊಂಡು ಕಾಡು ಉಳಿಸಬೇಕು ಎಂದು ತಿಳಿಸಿದರು.

ಅರಣ್ಯ ಇಲಾಖೆಯು ಗಿಡಗಳನ್ನು ಬೆಳೆಸುವ ಕೆಲಸ ಮಾಡುತ್ತಿದ್ದು, ನಾವೆಲ್ಲರೂ ಇಲಾಖೆ ಜತೆ ಕೈಜೋಡಿಸಬೇಕು. ಈ ನಾಡಿನಲ್ಲಿ ಮಲೆನಾಡಿನ ವೈಭವ ಮರುಕಳಿಸಬೇಕು. ಅರಣ್ಯ ಜೀವಿಗಳನ್ನು ಸಂರಕ್ಷಣೆ ಮಾಡುವಾಗ ಅನೇಕ ಸವಾಲು ಎದುರಾಗುತ್ತವೆ. ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿ ಸಿಬ್ಬಂದಿ ಮೇಲಿದೆ. ಜತೆಗೆ ಜೀವ ರಕ್ಷಣೆ ಮಾಡಿಕೊಳ್ಳುವ ಜವಾಬ್ದಾರಿಯೂ ಇರುತ್ತದೆ ಎಂದರು.

ತಾಲೂಕು ಪಶುವೈದ್ಯಾಧಿಕಾರಿ ಎಂ.ರವಿ ಮಾತನಾಡಿ, ಪ್ರತಿಯೊಬ್ಬರೂ ಜನ್ಮದಿನ ಆಚರಿಸಿಕೊಳ್ಳುವ ಜತೆಗೆ ಒಂದು ಸಸಿ ನೆಟ್ಟು ಬೆಳೆಸಿ ಆರೈಕೆ ಮಾಡಬೇಕು ಎಂದು ಸಲಹೆ ನೀಡಿದರು. ಪ್ರಕೃತಿ ಕುರಿತ ಚಿತ್ರಕಲಾ ಸ್ಪರ್ಧೆಯಲ್ಲಿ ರಚಿಸಿದ ಚಿತ್ರಗಳನ್ನು ಪ್ರದರ್ಶಿಸಲಾಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವಿ.ರವೀಂದ್ರ ನಾಯಕ್, ತಾಪಂ ಇಒ ಎನ್.ಜಿ.ನಾಗರಾಜ್, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ, ತಾಲೂಕು ಅಧ್ಯಕ್ಷ ಬಿ.ಎಲ್.ರಾಜು, ವಲಯ ಅರಣ್ಯ ಅಧಿಕಾರಿ ರೇವಣಸಿದ್ದಯ್ಯ ಹಿರೇಮಠ್, ಶಾಂತಪ್ಪ ಪೂಜಾರ್, ಜಾವೆದ್ ಬಾಷಾ ಅಂಗಡಿ, ಕೆಂಗಟ್ಟೆ ಲಕ್ಷ್ಮಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net