

ಕಾರ್ಗಲ್: ಶರಾವತಿ ಕಣಿವೆಯ ಮಹಾತ್ಮ ಗಾಂಧಿ ವಿದ್ಯುದಾಗಾರದ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ನೀರು ಪೂರೈಸುವ ಚೈನಾಗೇಟ್ ಸಮೀಪದ ಪವರ್ ಚಾನಲ್ ಮಾರ್ಗದಲ್ಲಿ ಮಣ್ಣು ಕುಸಿದಿದೆ. ದೊಡ್ಡ ಮಟ್ಟದಲ್ಲಿ ಕುಸಿತವಾಗಿ ಮಣ್ಣು ಚಾನಲ್ ನೀರಿಗೆ ಸಿಲುಕಿದರೆ ವಿದ್ಯುತ್ ಉತ್ಪಾದನೆಗೆ ತೊಡಕಾಗಲಿದೆ.
ಐವತ್ತು ಅಡಿಗೂ ಎತ್ತರವಿರುವ ಚಾನಲ್ ಮೇಲ್ಭಾಗದ ಧರೆ ಮಳೆ ಜಾಸ್ತಿಯಾದಲ್ಲಿ ಕುಸಿಯುವ ಅಪಾಯವಿದೆ. ಲಿಂಗನಮಕ್ಕಿ ಜಲಾಶಯ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಹೊರಹರಿಸುತ್ತಿರುವ ಹಿನ್ನೆಲೆಯಲ್ಲಿ ವ್ಯರ್ಥವಾಗದಂತೆ ಸದ್ಬಳಕೆ ಮಾಡಿಕೊಳ್ಳಬೇಕಿರುವ ಕಾರಣದಿಂದ ಗಂಭೀರವಾಗಿ ಪರಿಗಣಿಸಬೇಕಿದೆ.
ಚಾನಲ್ ಮೇಲ್ಭಾಗದಲ್ಲಿ ಕಾರ್ಗಲ್ ಜೋಗ ಮಾರ್ಗದ ಬೈಪಾಸ್ ರಸ್ತೆ ಇದ್ದು, ಹೆಚ್ಚಿನ ಪ್ರಮಾಣದಲ್ಲಿ ಹಾನಿ ಉಂಟಾದರೆ ರಸ್ತೆ ಮಾರ್ಗವೂ ಬಂದ್ ಆಗಲಿದೆ. ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
ಬೈಪಾಸ್ ರಸ್ತೆಯು ರಾಜ್ಯ ಹೆದ್ದಾರಿಗೆ ಸಂಬಂಧಿಸಿದ್ದು, ಮಣ್ಣು ಕುಸಿದು ರಸ್ತೆ ಸಂಚಾರಕ್ಕೆ ತೊಂದರೆ ಆಗುವ ಮುಂಚೆ ಇಲಾಖೆ ಸಿಬ್ಬಂದಿ ಸರಿಪಡಿಸಬೇಕು. ಒಂದೊಮ್ಮೆ ಮಣ್ಣು ಕುಸಿದು ನೀರಿನ ಹರಿವಿಗೆ ತೊಂದರೆಯಾದರೆ ನಿಗಮ ಕ್ರಮ ವಹಿಸಲಿದೆ. ಈಗಾಗಲೇ ಸ್ಥಳ ಪರಿಶೀಲನೆ ನಡೆಸಿದ್ದು, ಪ್ರಸ್ತುತ ಪೂರ್ಣ ಮಟ್ಟದಲ್ಲಿ ನೀರು ಹರಿಯುತ್ತಿದೆ ಎಂದು ಕೆಪಿಸಿ ಕಾರ್ಯನಿರ್ವಾಹಕ ಅಭಿಯಂತ ಆರ್.ಶಿವಕುಮಾರ್ ತಿಳಿಸಿದ್ದಾರೆ.