

ಹೊಳೆಹೊನ್ನೂರು: ಶಾಲೆ ಅಭಿವೃದ್ಧಿ ಹೊಂದುವಲ್ಲಿ ಶಿಕ್ಷಕರ ಪಾತ್ರ ಮಹತ್ತರ ಎಂದು ನಲಿ-ಕಲಿ ಕ್ರಿಯಾಶೀಲ ತಾರೆಯರ ಟ್ರಸ್ಟ್ ಅಧ್ಯಕ್ಷೆ ಫೌಜಿಯಾ ಸರ್ವತ್ ಹೇಳಿದರು.
ಸಮೀಪದ ಅರಹತೊಳಲು ಸರ್ಕಾರಿ ಶಾಲೆಯಲ್ಲಿ ನಲಿ-ಕಲಿ ಕ್ರಿಯಾಶೀಲ ತಾರೆಯರ ಟ್ರಸ್ಟ್ ಹಾಗೂ ನಾವೆಲ್ ಫೌಂಡೇಷನ್‌ನಿಂದ ಆಯ್ದ 12 ಶಾಲೆಗಳಿಗೆ ಉಚಿತ ಶಾಲಾ ಬ್ಯಾಗ್ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎನ್‌ಜಿಒ ಮಾದರಿ ಸಂಸ್ಥೆಯು ನಿರಂತರ ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಜಿಲ್ಲೆಯ 200ಕ್ಕೂ ಹೆಚ್ಚು ಶಾಲೆಗಳಿಗೆ 16 ಲಕ್ಷ ರೂ. ಮೌಲ್ಯದ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಗಿದೆ. ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ವಾಟರ್ ಬಾಟಲ್ ನೀಡುವ ಯೋಜನೆ ಇದೆ ಎಂದು ತಿಳಿಸಿದರು.
ಸಮೂಹ ಸಂಪನ್ಮೂಲ ವ್ಯಕ್ತಿ ವಾಣಿ ಮಾತನಾಡಿ, ಅರಹತೊಳಲು ಕ್ಲಸ್ಟರ್‌ನ 5 ಶಾಲೆಗಳು ಫಲಾನುಭವಿಗಳಾಗಿದ್ದಾರೆ. ಉಳಿದ ಐದು ಶಾಲೆಗಳಿಗೂ ಮುಂದಿನ ದಿನಗಳಲ್ಲಿ ಬ್ಯಾಗ್ ಕೊಡಬೇಕು ಎಂದು ಮನವಿ ಮಾಡಿದರು. ನೋವೆಲ್ ಹೋಪ್ ಫೌಂಡೇಷನ್ ಮ್ಯಾನೇಜರ್ ಆರ್.ದೀಪಕ್, ಟ್ರಸ್ಟ್ ಗೌರವಾಧ್ಯಕ್ಷೆ ವೈ.ಎನ್.ಲಲಿತಾ, ಮುಖ್ಯಶಿಕ್ಷಕಿ ಗಂಗಮ್ಮ, ರಂಗನಾಥ್ ಇತರರಿದ್ದರು.