ಶಿರಾಳಕೊಪ್ಪ: ಶರಣೆ ಅಕ್ಕಮಹಾದೇವಿ ಕ್ಷೇತ್ರದ ಅಭಿವೃದ್ಧಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಂಬಂಧಿತ ಇಲಾಖೆಗಳ ಸಚಿವರನ್ನು ಭೇಟಿ ಮಾಡುತ್ತೇನೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿದ ನಂತರ ಮಾತನಾಡಿ, ಈಗಾಗಲೇ ಪ್ರಗತಿಯಲ್ಲಿರುವ ಕೆಲಸಗಳಿಗೆ ಸಂಬಂಧಿಸಿ ಜಿಲ್ಲಾ ಕೇಂದ್ರದಲ್ಲಿ ಹಿರಿಯ ಅಧಿಕಾರಿಗಳ ಸಭೆ ಕರೆಯಲಾಗುವುದು. ಈಗಾಗಲೇ ನೀಡಿರುವ ಅನುದಾನದಲ್ಲಿ ಮಾಡಿರುವ ಫುಟ್‌ಪಾತ್, ಉದ್ಯಾನ ನಿರ್ವಹಣೆ, ನೀರಿನ ಮೂಲಗಳು, ಪೈಪ್‌ಲೈನ್ ನೀಲಿನಕ್ಷೆ ಸಿದ್ಧಪಡಿಸಿ ನೀಡುವಂತೆ ಸೂಚಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿದ ನಂತರ ಅಕ್ಕಮಹಾದೇವಿ ಕ್ಷೇತ್ರದ ಕೆಲಸಗಳಿಗೆ ಅನೇಕ ಅಡೆತಡೆಗಳು ಉಂಟಾಗಿವೆ. ಎಲ್ಲವನ್ನು ಮೀರಿ ಶರಣೆ ಅಕ್ಕಮಹಾದೇವಿ ಕ್ಷೇತ್ರವನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿ ನಿರ್ಮಾಣ ಮಾಡಲಾಗುತ್ತಿದೆ. ಬೋಟಿಂಗ್‌ಗೆ ದೋಣಿಗಳನ್ನು ತರಿಸಲಾಗಿದೆ. 32ಕ್ಕೂ ಹೆಚ್ಚು ಸಮಾಜದ ಶಿವಶರಣರ ಪುತ್ಥಳಿ ನಿರ್ಮಾಣ, ಆಕರ್ಷಕ ಗುಹೆ ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
ಅಕ್ಕಮಹಾದೇವಿ ಜನನ, ಜೀವನ ಹಾಗೂ ಅನುಭವ ಮಂಟಪದ ಸ್ತಬ್ಧಚಿತ್ರಗಳನ್ನು ಸುಂದರವಾಗಿ ನಿರ್ಮಿಸಲಾಗಿದೆ. ಉತ್ತಮ ಒಳಾಂಗಣ ಹಾಗೂ ಹೊರಾಂಗಣ ಅಡಿಟೋರಿಯಂ ಸಿದ್ಧವಾಗಿದೆ. ಕ್ಯಾಂಟೀನ್ ಕಟ್ಟಡ, ರಕ್ಷಣಾ ಗೋಡೆಗಳು ನಿರ್ಮಿಸಲಾಗಿದೆ. ಪ್ರಪಂಚದಲ್ಲಿ ಎತ್ತರವಾದ ಮಹಿಳಾ ಕವಿಯಿತ್ರಿ ಪುತ್ಥಳಿ ನೋಡಲು ಪ್ರತಿದಿನ ನೂರಾರು ಜನ ಪ್ರವಾಸಿಗರು ಬರುತ್ತಿದ್ದಾರೆ. ಪ್ರವಾಸಿಗರ ಅನುಕೂಲಕ್ಕಾಗಿ ಹೆಚ್ಚುವರಿ ಶೌಚಗೃಹ ನಿರ್ಮಾಣ ಮಾಡಬೇಕಾಗಿದೆ ಎಂದರು.
ಅಕ್ಕಮಹಾದೇವಿ ಕೇತ್ರದ ನಿರ್ವಹಣೆಗೆ ವಾರ್ಷಿಕ 50-60 ಲಕ್ಷ ರೂ. ಅನುದಾನದ ಅವಶ್ಯಕತೆ ಇದೆ. ಸರ್ಕಾರದಿಂದ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗಿದೆ. ಸಿಎಸ್‌ಆರ್ ಅನುದಾನ ತರುವ ಮೂಲಕ ಖಾಸಗಿಯವರಿಗೆ ನಿರ್ವಹಣೆ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಶಾಸಕ ಬಿ.ವೈ.ವಿಜಯೇಂದ್ರ ಅವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.
ಟಿಎಪಿಎಂಎಸ್ ಅಧ್ಯಕ್ಷ ಸುಧೀರ್ ಮಾರವಳ್ಳಿ, ಎಪಿಎಂಸಿ ಮಾಜಿ ಅಧ್ಯಕ್ಷ ತಾಳಗುಂದ ಸತೀಶ್, ಪುರಸಭೆ ಮಾಜಿ ಅಧ್ಯಕ್ಷ ಎಚ್.ಎಂ.ಚಂದ್ರಣ್ಣ, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂಗಮೇಶ್, ಇಂದೂಧರ, ಟೌನ್ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅಗಡಿ ಆದಿತ್ಯ, ಜಿಲ್ಲಾ ಒಬಿಸಿ ಸೆಲ್ ದಿವಾಕರ್, ಜಿಲೇಬಿ ಮಂಜುನಾಥಯ್ಯ ಇತರರಿದ್ದರು.