ಸೊರಬ: ಮೀನುಗಾರರು ಆಕಸ್ಮಿಕವಾಗಿ ಮರಣ ಹೊಂದಿದ ಸಂದರ್ಭದಲ್ಲಿ ಆತನ ಕುಟುಂಬದಲ್ಲಿನ ಹೆಣ್ಣುಮಕ್ಕಳಿಗೆ ಸರ್ಕಾರ ವಿಶೇಷ ಸವಲತ್ತುಗಳನ್ನು ನೀಡಿದೆ. ಹಾಗಾಗಿ ಸಂಘದಲ್ಲಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ದಂಡಾವತಿ ಮೀನುಗಾರರ ಸಹಕಾರ ಸಂಘದ ತಾಲೂಕು ಅಧ್ಯಕ್ಷ ಎ.ಸಮೀವುಲ್ಲಾ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಶ್ರೀ ದಂಡಾವತಿ ಮೀನುಗಾರರ ಸಹಕಾರ ಸಂಘದ ಮೊದಲ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಷೇರುದಾರರ ಕುಟುಂಬದಲ್ಲಿನ ಮಹಿಳೆಯರಿಗೆ ಮೊದಲ ಆದ್ಯತೆ ನೀಡಿದ್ದು, ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಬೇಕು. ಸಂಘದ ಬಲವರ್ಧನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ ಯೋಜನೆಗಳ ಪ್ರಯೋಜನ ಪಡೆಯಬಹುದು. ಮೀನುಗಾರರು ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ತಿಳಿಸಿದರು.
ಪ್ರತಿ ವರ್ಷ ಜುಲೈನಲ್ಲಿ ಬಲೆ, ತೆಪ್ಪವನ್ನು ಸಬ್ಸಿಡಿ ದರದಲ್ಲಿ ವಿತರಿಸಲಾಗುವುದು. ಮೀನುಗಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ವಸತಿ ನಿರ್ಮಿಸಲು ಸಹಾಯಧನ, ಅಪಘಾತದಲ್ಲಿ ಮೃತಪಟ್ಟರೆ ಕುಟುಂಬಕ್ಕೆ 1 ಲಕ್ಷ ರೂ. ವಿಮೆ ನೀಡಲು ಇಲಾಖೆಯಲ್ಲಿ ಅವಕಾಶವಿದೆ. ಮೀನುಗಾರರು ಸಂಘದ ಸದಸ್ಯತ್ವ ಪಡೆದು ಸಕಾಲದಲ್ಲಿ ನವೀಕರಣ ಮಾಡಿಕೊಳ್ಳಬೇಕು. ಮೀನುಗಾರರಿಗೆ ಎಲ್ಲ ಸಹಕಾರ ನೀಡಲು ಬದ್ಧವಿದೆ.
ವಿಕಾಸ್
ಮೀನುಗಾರಿಕೆ ಇಲಾಖೆ ಅಧಿಕಾರಿ, ಸೊರಬ
ಶಿವಮೊಗ್ಗ ಜಿಲ್ಲಾ ಮೀನುಗಾರರ ಸಹಕಾರ ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಸರ್ಕಾರ ಮೀನುಗಾರರಿಗೆ ಆರೋಗ್ಯ ವಿಮೆ ಸೇರಿ ಹಲವು ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ. ಷೇರುದಾರರ ಸಂಖ್ಯೆ ಹೆಚ್ಚು ಮಾಡುವ ಜತೆಗೆ ಮಹಾಸಭೆ ಮೂಲಕ ಸಂಘದ ಎಲ್ಲ ಆಯವ್ಯಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಹೇಳಿದರು.
ಮೀನುಗಾರಿಕೆ ಇಲಾಖೆ ಜಿಲ್ಲಾ ಸಹಾಯಕ ನಿರ್ದೇಶಕ ಮಾಧುಸ್ವಾಮಿ, ಸಾಗರ ತಾಲೂಕು ಮೀನುಗಾರರ ಸಂಘದ ಅಧ್ಯಕ್ಷ ಹಮ್ಜ್ ಅಹಮದ್, ನಿರ್ದೇಶಕರಾದ ಇರ್ಷಾದ್, ಸೈಯದ್ ಶಕೀಲ್, ಅನ್ಸರ್ ಅಹಮದ್, ಇರ್ಫಾನ್, ಮಹಾದೇವಪ್ಪ, ಬಾಷಾ, ರಿಜ್ವಾನ್ ನರಸಾಪುರ, ಸೈಯದ್ ಅಸ್ಲಂ, ಅಯೂಬ್ ಖಾನ್, ರ್ಹಾನ್, ಸುಬಾನ್ ಬೇಗ್, ರಂಗನಾಥ, ತಸ್ಲೀಮ್ ಇತರರಿದ್ದರು.