ಸೊರಬ: ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಮಠಗಳು, ಸಂಘ ಸಂಸ್ಥೆಗಳು ಸಹ ಪರಿಸರ ಜಾಗೃತಿ ಮೂಡಿಸಲು ಕೈಜೋಡಿಸಬೇಕು ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ಪಟ್ಟಣದ ಮುರುಘಾ ಮಠದಲ್ಲಿ ಆಯೋಜಿಸಿದ್ದ 234ನೇ ಶಿವಾನುಭವ ಕಾರ್ಯಕ್ರಮ ಹಾಗೂ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಆಧುನಿಕ ಸಂಸ್ಕೃತಿ ಪ್ರಭಾವದಿಂದ ಪರಿಸರ ವಿನಾಶದ ಅಂಚಿಗೆ ತಲುಪುತ್ತಿದೆ. ಇಂದಿನ ಯುವಪೀಳಿಗೆ ಜವಾಬ್ದಾರಿ ಅರಿತು ಪರಿಸರ ಕಾಪಾಡಬೇಕು ಎಂದು ತಿಳಿಸಿದರು.
ಪರಿಸರ ನಾಶಕ್ಕೆ ಮಾನವನೇ ಮೂಲ ಕಾರಣ. ಮನುಷ್ಯ ಮಾಡುವ ಕಾರ್ಯಗಳು ಪ್ರಕೃತಿಗೆ ಮಾರಕವಾಗಿವೆ. ಪರಿಸರ ರಕ್ಷಣೆಗೆ ಆದ್ಯತೆ ನೀಡಬೇಕು. ಗಿಡ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸುವ ನಾವು ನೆಟ್ಟಿರುವ ಗಿಡಗಳನ್ನು ಪೋಷಿಸಬೇಕು.
ಡಾ. ಜ್ಞಾನೇಶ್
ದಂತ ವೈದ್ಯ
ನವಲಗುಂದದ ಗವಿಮಠದ ಶ್ರೀ ಬಸವಲಿಂಗ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಪರಿಸರದ ಬಗ್ಗೆ ಪರಿಜ್ಞಾನ ಮೂಡಿಸಬೇಕಿದೆ. ಪ್ಲಾಸ್ಟಿಕ್‌ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಸಲಹೆ ನೀಡಿದರು.
ಅನುಪಯುಕ್ತ ವಸ್ತುಗಳಿಂದ ಕಲುಷಿತ: ಕೊಳ್ಳುಬಾಕ ಸಂಸ್ಕೃತಿಯಿಂದ ಪರಿಸರ ದಿನನಿತ್ಯ ಹಾಳಾಗುತ್ತಿದೆ ಎಂದು ಬೆಂಗಳೂರಿನ ಉಳಿವು ಫೌಂಡೇಷನ್ ಸೆಂಟರ್ ಫಾರ್ ಸಿಂಬಿಯೋಸಿನ್ ಸಂಸ್ಥಾಪಕಿ ಡಾ. ಎಸ್.ಆರ್.ಸೀಮಾ ಹೇಳಿದರು. ವೃಕ್ಷಪೂಜೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಳೇ ವಸ್ತುಗಳನ್ನು ಕೊಟ್ಟು ಹೊಸ ವಸ್ತುಗಳನ್ನು ಖರೀದಿಸಿ ಎಂದು ಆಮಿಷ ತೋರಿಸಿ ಹೊಸ ಹೊಸ ವಸ್ತುಗಳನ್ನು ಕೈಗಾರಿಕೋದ್ಯಮಿಗಳು ಉತ್ಪಾದನೆಗೆ ಮುಂದಾಗಿದ್ದರಿಂದ ಉತ್ಪಾದನೆ ಹೆಚ್ಚಳಕ್ಕಾಗಿ ಪರಿಸರ ನಾಶ ಮಾಡಲಾಗುತ್ತಿದೆ. ನಿತ್ಯ ಉಪಯೋಗಿಸಿ ಎಸೆಯುವ ಅನುಪಯುಕ್ತ ವಸ್ತುಗಳು ನದಿ, ಗಾಳಿ ಸೇರಿ ಪರಿಸರ ಕಲುಷಿತವಾಗುತ್ತಿದೆ ಎಂದು ಹೇಳಿದರು.
ಸಾಗರ ಸೈನ್ಸ್ ಫೋರಂ ಅಧ್ಯಕ್ಷ ಡಾ. ಎಚ್.ಎಸ್.ಜೀವನ್ ಮಾತನಾಡಿ, ಜಾಗತಿಕ ತಾಪಮಾನ ಹೆಚ್ಚಾಗುತ್ತಿರುವ ಪರಿಣಾಮ ಸಮಸ್ಯೆಗಳು ಉಂಟಾಗುತ್ತಿವೆ. ಎಲ್ಲರೂ ಸರಳ ಜೀವನಶೈಲಿ ಅಳವಡಿಸಿಕೊಂಡರೆ ಪರಿಸರ ನಾಶ ತಡೆಯಬಹುದು ಎಂದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಸಿರಿಗೌರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾಂತಾರ ಯಜ್ಞ ಕೊಪ್ಪಲು ಕೆರೇಕೊಪ್ಪ ಆಯೋಜಿಸಿದ್ದ ಪರಿಸರ ಜಾಗೃತಿ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಂತಾರಯಜ್ಞ ಕೊಪ್ಪಲು ಕೆರೇಕೊಪ್ಪ, ಭಾರತೀ ಸಂಪದ ವಡ್ಡನಗದ್ದೆ, ಪರಿಸರ ಜಾಗೃತಿ ಟ್ರಸ್ಟ್, ಶ್ರೀ ವಿನಾಯಕ ಮೋಟಾರ್ಸ್, ದೊಡ್ಡಮನೆ ರಾಮಪ್ಪ ಶ್ರೀಧರ್ ಸೇವಾ ಟ್ರಸ್ಟ್, ಕಲಾದ್ವಯ ಬೀ ನರ್ಸರಿ, ಅಕ್ಕನ ಬಳಗ ಸೇವಾ ಟ್ರಸ್ಟ್ ಹಾಗೂ ಮುರುಘಾ ಮಠದ ಸಹಯೋಗದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಿವೃತ್ತ ಪ್ರಾಚಾರ್ಯ ಪ್ರೊ. ಎಚ್.ಬಿ.ಪಂಚಾಕ್ಷರಯ್ಯ ಸಮಾರೋಪ ಭಾಷಣ ಮಾಡಿದರು. ಕದಂಬ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕಿ ವಸುಮತಿ, ಪರಿಸರ ಜಾಗೃತಿ ಟ್ರಸ್ಟ್ ಅಧ್ಯಕ್ಷ ಎಂ.ಆರ್.ಪಾಟೀಲ್, ಮಂಜುನಾಥ್, ಉಪವಲಯ ಅರಣ್ಯಾಧಿಕಾರಿ ಭದ್ರೇಶ್, ಡಾ. ಜಾಹ್ನವಿ, ಪ್ರಶಾಂತ್, ಶಿರಾಳಕೊಪ್ಪ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕಿ ಪ್ರಿಯದರ್ಶಿನಿ, ಮಠದ ಕಾರ್ಯದರ್ಶಿ ಡಿ.ಶಿವಯೋಗಿ ಇತರರಿದ್ದರು.