

ಸೊರಬ: ಶಾಲೆಯಲ್ಲಿ ಆಹಾರ ಗುಣಮಟ್ಟ ಕಾಯ್ದುಕೊಳ್ಳಲು ಮೊದಲ ಹಂತದಲ್ಲಿ 16,500 ಸರ್ಕಾರಿ ಶಾಲೆಗಳಿಗೆ ಸರ್ಕಾರದಿಂದ ಅಲ್ಯೂಮಿನಿಯಂ ಪಾತ್ರೆ ವಿತರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ತಾಲೂಕಿನ ಬಿಳಾಗಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸುವರ್ಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗದಂತೆ ಹಾಗೂ ದೈಹಿಕ, ಮಾನಸಿಕ ವಿಕಸನಕ್ಕೆ ಪೂರಕವಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಪೌಷ್ಟಿಕ ಆಹಾರದ ಜತೆಗೆ ಎಲ್ಲ ಮಕ್ಕಳಿಗೂ ಮೊಟ್ಟೆ ವಿತರಿಸಲಾಗುತ್ತಿದೆ. ಅಹಾರದ ಗುಣಮಟ್ಟ ಕಾಯ್ದುಕೊಳ್ಳಲು ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಅಲ್ಯೂಮಿನಿಯಂ ಪಾತ್ರೆ ನೀಡಲಾಗುವುದು ಎಂದು ತಿಳಿಸಿದರು.
ಮಕ್ಕಳ ಕಡ್ಡಾಯ ಹಾಜರಾತಿ ಬಗ್ಗೆ ಶಿಕ್ಷಕರು ಗಮನ ನೀಡಬೇಕು. ಪಾಲಕರು ಕೂಡ ಮಕ್ಕಳು ಶಾಲೆಗೆ ಗೈರಾಗದಂತೆ ನೋಡಿಕೊಳ್ಳಬೇಕು. ಒಂದು ದಿನದ ಪಾಠ ತಪ್ಪಿದರೆ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿ ಪರಿಗಣಿಸಲಿದೆ. ಶಿಕ್ಷಕರು ಹಾಗೂ ಪಾಲಕರು ಗಂಭೀರವಾಗಿ ಪರಿಗಣಿಸಿ ತರಗತಿಯಿಂದ ಮಕ್ಕಳು ಹೊರಗುಳಿಯದಂತೆ ಎಚ್ಚರ ವಹಿಸಬೇಕು ಎಂದರು.
ಅಂಗನವಾಡಿಯಲ್ಲಿ ಮಕ್ಕಳ ಕೊರತೆ ಆಗದಂತೆ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ದೊರೆಯಲಿ ಎಂಬ ಉದ್ದೇಶದಿಂದ ಸರ್ಕಾರಿ ಶಾಲೆಯಲ್ಲಿ ಎಲ್ಕೆಜಿ ತರಗತಿಗಳಿಗೆ ಒತ್ತು ನೀಡಲಾಗುತ್ತಿದೆ. ಕಡಿಮೆ ಮಕ್ಕಳಿರುವ ಶಾಲೆಗಳನ್ನು ಹತ್ತಿರದ ಉತ್ತಮ ಶಾಲೆಗಳಿಗೆ ಸೇರ್ಪಡೆಗೊಳಿಸುವ ಚಿಂತನೆ ನಡೆದಿದೆ. ಮಧು ಬಂಗಾರಪ್ಪ ಶಿಕ್ಷಣ ಸಚಿವ
ಸರ್ಕಾರ ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಸೌಲಭ್ಯಗಳನ್ನು ನೀಡಿದೆ. ಇದರಿಂದ ಮಕ್ಕಳ ಕೊರತೆ ಎದುರಿಸುತ್ತಿರುವ ಶಾಲೆಗಳನ್ನು ಮುಂದುವರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು. ಸುವರ್ಣ ಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಕೆ.ಆರ್.ಶಿವಾನಂದಪ್ಪ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಆರ್.ವಸಂತಕುಮಾರ್, ಉದ್ರಿ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಜಯಶೀಲಗೌಡ, ತಹಸೀಲ್ದಾರ್ ಮಂಜುಳಾ ಹೆಗಡಾಳ್, ಬಿಇಒ ಪುಷ್ಪಾ, ದಯಾನಂದ ಕಲ್ಲೇರ, ಡಾ. ಶ್ರೀಕಾಂತ್, ಸಂಜೀವ್ ಕುಮಾರ ಇತರರಿದ್ದರು.