ಜನಹಿತ ಕಾರ್ಯದಿಂದ ಋಣಮುಕ್ತ

8 skp 1 a
ಶಿಕಾರಿಪುರದಲ್ಲಿ ಏರ್ಪಡಿಸಿದ್ದ ಸುರಭಿ ಭವನದ ರಜತ ಮಹೋತ್ಸವದಲ್ಲಿ ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತೊಗರ್ಸಿ ಪಂಚವಣ್ಣಿಗೆ ಶ್ರೀಗಳು, ಮೂಲೆಗದ್ದೆ ಅಭಿನವ ಚನ್ನಬಸವ ಶ್ರೀಗಳು, ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ, ಶೈಲಾ ಮಡ್ಡಿ, ಎಚ್.ಜಿ.ಮೃತ್ಯುಂಜಯ ಇತರರಿದ್ದರು.
Published on

ಶಿಕಾರಿಪುರ: ಸಮಾಜಕ್ಕಾಗಿ ಬದುಕು ಸಮರ್ಪಣೆ ಆಗಬೇಕು. ಪರರ ಸಂಕಷ್ಟಗಳ ಅರಿವು ನಮಗಿದ್ದರೆ ಮಾನವೀಯ ಮೌಲ್ಯಗಳ ಅರಿವು ಸಹ ಉಂಟಾಗುತ್ತದೆ. ಇದರಲ್ಲಿಯೇ ಶ್ರೇಷ್ಠತೆ ಅಡಗಿದೆ ಎಂದು ಕೊಪ್ಪಳ ಗವಿಮಠದ ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಸುರಭಿ ಭವನದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸ್ವಹಿತಕ್ಕಿಂತ ಸಮಷ್ಠಿ ಹಿತ ಮುಖ್ಯವಾಗಬೇಕು. ನಮ್ಮ ನಡೆ-ನುಡಿ, ಬದುಕಿನ ಪ್ರತಿ ಹೆಜ್ಜೆಗಳಲ್ಲೂ ಸದ್ವಿಚಾರ, ಸಹನೆ, ಸದ್ಭಾವಗಳನ್ನು ಹೊಂದಿರಬೇಕು. ಸಹನಶೀಲ ಬದುಕು ನಮ್ಮದಾಗಬೇಕು. ಸುರಭಿ ಬಳಗ 25 ವಸಂತಗಳನ್ನು ಸಾರ್ಥಕ್ಯದಿಂದ ಪೂರೈಸಿದೆ. ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಕೊಪ್ಪಳದ ಗವಿಮಠ

ಶಿಕಾರಿಪುರ ತಾಲೂಕು ಮಹಾಶರಣೆ ಅಕ್ಕಮಹಾದೇವಿಗೆ ಜನ್ಮ ನೀಡಿದ ನಾಡು. ಅಕ್ಕಮಹಾದೇವಿ ಸಂದೇಶಗಳನ್ನು ಅಳವಡಿಸಿಕೊಳ್ಳದೆ ನಾವು ಅನಗತ್ಯ ಹಪಾಹಪಿಸುತ್ತೇವೆ. ಸಂಪತ್ತಿಲ್ಲದೆ ತಾನು ಪರಮಸುಖಿಯಾದೆ ಎಂದು ಅಕ್ಕ ವಚನಗಳಲ್ಲಿ ಉಲ್ಲೇಖಿಸುತ್ತಾಳೆ. ಸುಖ, ಸಂತೋಷ ಎನ್ನುವುದು ಸಂಪತ್ತು, ವೈಭೋಗಗಳಲ್ಲಿಲ್ಲ, ಅದು ಆತ್ಮತೃಪ್ತಿಯಲ್ಲಿದೆ ಎಂದರು.

ಕಾಯಕ ದಾಸೋಹ ಸದಾ ಸ್ಫೂರ್ತಿ: ವಾಸ್ತವ ಬದುಕಿನ ಪ್ರತಿಬಿಂಬವಾಗಿ ನಾವು ಬದುಕಬೇಕು. ಸತ್ಯ, ಸತ್ವ ನಮ್ಮನ್ನು ಜನಮನದಲ್ಲಿ ಚಿರಸ್ಥಾಯಿ ಆಗಿರುವಂತೆ ಮಾಡುತ್ತದೆ. ಶರಣರ ಬದುಕು ಚೈತನ್ಯದಿಂದ ಕೂಡಿತ್ತು. ಅವರ ಸಾಮಾಜಿಕ ಕಳಕಳಿ, ಸಮಾನತೆಯ ಆಶಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಸಾತ್ವಿಕ ಚಿಂತನೆಗಳು, ಸಹನಶೀಲ ಮನಸ್ಸುಗಳಿಂದ ಸಮಾಜವನ್ನು ನಾವು ಸದೃಢಗೊಳಿಸಲು ಸಾಧ್ಯ. ಧಾರ್ಮಿಕ ಚಿಂತನೆಗಳು ನಮ್ಮನ್ನು ಧರ್ಮ ಕಾರ್ಯಕ್ಕೆ ಗಟ್ಟಿಗೊಳಿಸಿ ಅಣಿಗೊಳಿಸುತ್ತವೆ. ಶರಣರ ಕಾಯಕ ದಾಸೋಹ, ಸಹಬಾಳ್ವೆ ನಮಗೆ ಸದಾ ಸ್ಫೂರ್ತಿ ಎಂದು ತಿಳಿಸಿದರು.

ಸೇವೆ ಎನ್ನುವುದು ಯಜ್ಞ ಇದ್ದಂತೆ. ಸಾಮಾಜಿಕ ಕಳಕಳಿಯೇ ಹವಿಸ್ಸು. ಸಮಾಜದ ಋಣ ನಮ್ಮೆಲ್ಲರ ಮೇಲಿದೆ. ಜನಸೇವೆ ಮತ್ತು ಜನಹಿತ ಕಾರ್ಯಗಳನ್ನು ಮಾಡುವ ಮೂಲಕ ಸಮಾಜದ ಋಣದಿಂದ ನಾವು ಮುಕ್ತರಾಗಬೇಕು ಎಂದು ತಿಳಿಸಿದರು.

ಪ್ರವಾಸಿ ತಾಣವಾಗಿ ಉಡುತಡಿ: ಕೊಪ್ಪಳ ಗವಿಮಠ ನಾಡಿನಲ್ಲಿ ಒಂದು ಶ್ರೇಷ್ಠ ಚಿಂತನೆಗಳ ಮಠವಾಗಿ ಬೆಳೆಸಿದವರು ಶ್ರೀ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಶಾಸಕ ಬಿ.ವೈ.ವಿಜಯೇಂದ್ರ ಹೇಳಿದರು. ಶ್ರೀಗಳ ಸಂಕಲ್ಪ ಶಕ್ತಿ ಅದ್ಭುತವಾದುದು. ಶ್ರೀ ಗವಿಸಿದ್ದೇಶ್ವರರು ಶ್ರೀಗಳ ರೂಪದಲ್ಲಿ ಶಿಕಾರಿಪುರಕ್ಕೆ ಬಂದಿದ್ದಾರೆ ಎಂದು ಬಣ್ಣಿಸಿದರು. ತಾಲೂಕಿನಲ್ಲಿ ಮಹಾಶರಣೆ ಅಕ್ಕಮಹಾದೇವಿ ಜನ್ಮಸ್ಥಳ ಉಡುತಡಿಯನ್ನು 69 ಕೋಟಿ ರೂ. ವೆಚ್ಚದಲ್ಲಿ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಕೂಡಲ ಸಂಗಮ ಮಾದರಿಯಲ್ಲಿ ಒಂದು ಅದ್ಭುತ ಪ್ರವಾಸಿ ತಾಣವಾಗಲಿದೆ ಎಂದರು.

ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಧರ್ಮೋತ್ಥಾನ, ಸಮಾಜೋತ್ಥಾನ, ಜೀವ ಸೇವೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡು ಕೊಪ್ಪಳದ ಶ್ರೀ ಮಠವನ್ನು ನಾಡಿನ ಒಂದು ಶ್ರೇಷ್ಠ ಆಧ್ಯಾತ್ಮಿಕ ತಾಣವನ್ನಾಗಿ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲಬೇಕು. ಶ್ರೀಗಳ ಪ್ರತಿ ಹೆಜ್ಜೆಗಳಲ್ಲಿಯೂ ಧರ್ಮದ ಬಗ್ಗೆ ಕಳಕಳಿಯಿದೆ ಎಂದು ತಿಳಿಸಿದರು.

ಆಧ್ಯಾತ್ಮಿಕ ಬಲದಿಂದ ಭಾರತ ಪ್ರಕಾಶ: ಭಾರತ ದೇಶ ತನ್ನಲ್ಲಿರುವ ಆಧ್ಯಾತ್ಮಿಕ ಬಲದಿಂದ ಜಗತ್ತಿನಾದ್ಯಂತ ಪ್ರಕಾಶಿಸುತ್ತಿದೆ. ಎಲ್ಲ ಶಕ್ತಿಗಳಿಗಿಂತ ಮಿಗಿಲಾದ ಶಕ್ತಿ ಅಧ್ಯಾತ್ಮ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು. ಸಾಧು-ಸಂತರು, ಮಹನೀಯರು, ಶರಣರಿಂದ ಭಾರತ ಪುಣ್ಯಭೂಮಿ ಆಗಿದೆ. ಭಾರತೀಯರು ಸನ್ನಡತೆ, ಸಹೃದಯತೆ ಮತ್ತು ಸಹಿಷ್ಣುತೆಯಿಂದ ಪ್ರಪಂಚದ ಗಮನ ಸೆಳೆದವರು. ಆ ಪರಂಪರೆಯನ್ನು ನಾವು ಉಳಿಸಿ ಬೆಳೆಸಬೇಕಾದ ಅಗತ್ಯವಿದೆ ಎಂದರು. ಆಧ್ಯಾತ್ಮಿಕ ಪ್ರವಚನಗಳಿಂದ ಭಕ್ತರ ಹೃದಯಾಳದಲ್ಲಿ ನೆಲೆಸಿರುವ ಶ್ರೀ ಅಭಿನವ ಗವಿಸಿದ್ದೇಶ್ವರ ಪೂಜ್ಯರ ಆಗಮನದಿಂದ ಭಕ್ತರಿಗೆ ಸಂತಸವಾಗಿದೆ. ಆಧುನಿಕ ಜಗತ್ತಿನ ವಿವೇಕಾನಂದರು. ಅವರ ಮಾತು ಆಲಿಸುತ್ತಿದ್ದರೆ ಮನಸ್ಸು ರಾಗದ್ವೇಷಗಳಿಂದ ಮುಕ್ತವಾಗುತ್ತವೆ ಎಂದು ತಿಳಿಸಿದರು. ಸುರಭಿ ಬಳಗ ಸಮಾಜಮುಖಿ ಕಾರ್ಯಗಳಿಂದ ಜನಮನಕ್ಕೆ ಹತ್ತಿರವಾಗಿ ರಜತ ಮಹೋತ್ಸವ ಆಚರಿಸುತ್ತಿದೆ. ಸಂಸ್ಥೆ ನಿರಂತರವಾಗಿರಲು ಸದಸ್ಯರಲ್ಲಿನ ಪರಸ್ಪರ ನಂಬಿಕೆ, ವಿಶ್ವಾಸಗಳೇ ಕಾರಣ. ಪ್ರತಿ ಸಂಸ್ಥೆ ಆಯುಷ್ಯವು ಶಿಸ್ತು ಮತ್ತು ಕಾರ್ಯಶೈಲಿ ಮೇಲೆ ಅವಲಂಬಿತವಾಗಿರುತ್ತದೆ ಎಂದು ತಿಳಿಸಿದರು.

ಮೂಲೆಗದ್ದೆ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಉಪಸ್ಥಿತರಿದ್ದರು. ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಸುರಭಿ ಬಳಗದ ಅಧ್ಯಕ್ಷ ಎಚ್.ಜಿ.ಮೃತ್ಯುಂಜಯ, ಪುರಸಭೆ ಅಧ್ಯಕ್ಷೆ ಶೈಲಾ ಮಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ.ಎಲ್.ಬಸವರಾಜ್, ಸುರಭಿ ಬಳಗದ ಪಾಂಡುರಂಗ ರಾಯ್ಕರ್, ಸಾಲೂರು ಕುಮಾರ್, ಅಂಗಡಿ ಜಗದೀಶ್, ಏಕೇಶ್ವರಪ್ಪ, ಶಿವಮೂರ್ತಪ್ಪ, ರುದ್ರಯ್ಯ, ಈರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net