ಸೊರಬ: ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಉದ್ರಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ. ಎಂ.ಕೆ.ಮಹೇಶ್ ಹೇಳಿದರು.
ನಡಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಸೊರಬ ತಾಲೂಕಿನ ಜಗದೀಶ್‌ಚಂದ್ರ ಬೋಸ್ ಇಕೋ ಕ್ಲಬ್‌ನಿಂದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದ ಔಷಧ ವನಕ್ಕೆ ವನಸಂಚಾರ ಕಾರ್ಯಕ್ರಮದಡಿ ಭೇಟಿ ನೀಡಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಪರಿಸರ, ಅರಣ್ಯ, ಮರಗಿಡಗಳ ಉಪಯುಕ್ತತೆ ಬಗ್ಗೆ ಮಾಹಿತಿ ನೀಡುವುದು ಮುಖ್ಯ. ಗಿಡ, ಮರಗಳು ನಾಶವಾದರೆ ಅದನ್ನು ನಂಬಿಕೊಂಡಿರುವ ಮಾನವ ಕೂಡ ನಾಶವಾಗುತ್ತಾನೆ. ಪ್ರಸ್ತುತ ನಡೆಯುತ್ತಿರುವ ಪ್ರಕೃತಿ ವಿಕೋಪಗಳಿಗೆ ಪರಿಸರ, ಅರಣ್ಯ ನಾಶವೇ ಕಾರಣ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಚಿಕಿತ್ಸಾಲಯದ ಆವರಣದಲ್ಲಿ ಬೆಳೆದಿರುವ ಔಷಧ ಸಸ್ಯಗಳ ಪರಿಚಯ ಮಾಡಿಕೊಡಲಾಯಿತು. ಅಸಾಂಕ್ರಾಮಿಕ ರೋಗಗಳು, ಸಮತೋಲನ ಆಹಾರ, ಆರೋಗ್ಯ ಕಾಪಾಡಿಕೊಳ್ಳುವ ಸರಳ ವಿಧಾನಗಳು, ನಿತ್ಯ ಮಕ್ಕಳು, ವಯಸ್ಕರು ಅನುಸರಿಸಬೇಕಾದ ಆರೋಗ್ಯ ನಿಯಮಗಳು ಹಾಗೂ ಜೀವನಶೈಲಿ ಬಗ್ಗೆ ತಿಳಿಸಲಾಯಿತು.
ನಡಹಳ್ಳಿ ಶಾಲೆ ಮುಖ್ಯಶಿಕ್ಷಕಿ ವನಜಾಕ್ಷಿ, ಸಹಶಿಕ್ಷಕರಾದ ಪರಮೇಶ್ವರಪ್ಪ, ಲಕ್ಷ್ಮಣಪ್ಪ, ಷಣ್ಮುಖಪ್ಪ, ಮೀನಾಕ್ಷಿ, ಉದ್ರಿ ಚಿಕಿತ್ಸಾಲಯದ ಶಿವಮೂರ್ತಪ್ಪ, ಗ್ರಾಮಸ್ಥರು ಇದ್ದರು.