ಪ್ರಾಮಾಣಿಕತೆ, ಬದ್ಧತೆಯುಳ್ಳ ರಾಜಕಾರಣಿ ಎಲ್ಲರಿಗೂ ಮಾದರಿ

19 TTH 01
ತೀರ್ಥಹಳ್ಳಿ ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ಕುರಿತ ಪುಸ್ತಕವನ್ನು ಸಚಿವ ಮಧು ಬಂಗಾರಪ್ಪ ಬಿಡುಗಡೆಗೊಳಿಸಿದರು. ಸ್ವಾಮಿ ಜಿತಕಾಮಾನಂದ, ಆರಗ ಜ್ಞಾನೇಂದ್ರ, ಕಿಮ್ಮನೆ ರತ್ನಾಕರ್, ಬಿ.ಸ್ವಾಮಿರಾವ್, ನೈಜಲಾ ಪಟಮಕ್ಕಿ ರತ್ನಾಕರ್ ಕಲಗೋಡು ರತ್ನಾಕರ್ ಇತರರಿದ್ದರು.
Published on

ತೀರ್ಥಹಳ್ಳಿ: ಆದರ್ಶ ರಾಜಕಾರಣಿಗಳ ಬದುಕು ದಾಖಲೀಕರಿಸಿ ಶಾಶ್ವತಗೊಳಿಸುವ ಕಾರ್ಯ ಶ್ಲಾಘನೀಯ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

ಪಟ್ಟಣದ ಗೋಪಾಲ ಗೌಡ ರಂಗಮಂದಿರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ಕ್ಷೇತ್ರದ ಮಾಜಿ ಶಾಸಕ ಪಟಮಕ್ಕಿ ರತ್ನಾಕರ್ ಕುರಿತ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ರತ್ನಾಕರ್ ಅವರ ವಿಷಯ ಮಂಡನೆ, ಪ್ರಾಮಾಣಿಕತೆ ಮತ್ತು ಬದ್ಧತೆ ಅನುಕರಣೀಯ. ಸಾರ್ವಜನಿಕ ಗ್ರಂಥಾಲಯಗಳಿಗೆ ಪಟಮಕ್ಕಿ ರತ್ನಾಕರ್ ಅವರ ಕುರಿತ ಪುಸ್ತಕ ಖರೀದಿಸುವ ಬಗ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮಕ್ಕಳಲ್ಲಿ ಜಾತಿ, ಧರ್ಮದ ಭೇದವಿಲ್ಲದೆ ಸತ್ಯ, ಧರ್ಮ ಮತ್ತು ಪ್ರಾಮಾಣಿಕ ಗುಣಗಳನ್ನು ಬೆಳೆಸುವ ಕಾರ್ಯ ಪ್ರಾಥಮಿಕ ಹಂತದಿಂದಲೇ ಆಗಬೇಕಿದೆ. ಡಾ. ಬಿ.ಆರ್.ಅಂಬೇಡ್ಕರ್ ರಚಿತ ಸಂವಿಧಾನದ ಆಶಯಗಳನ್ನು ಮನವರಿಕೆ ಮಾಡಿಕೊಡಲು ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದುವುದನ್ನು ಕಡ್ಡಾಯಗೊಳಿಸಲಾಗಿದೆ. ಮಧು ಬಂಗಾರಪ್ಪ ಶಿಕ್ಷಣ ಸಚಿವ

ಸಮಾರಂಭ ಉದ್ಘಾಟಿಸಿದ ಮಂಗಳೂರು ರಾಮಕೃಷ್ಣ ಆಶ್ರಮದ ಸ್ವಾಮಿ ಜಿತಕಾಮಾನಂದ ಮಾತನಾಡಿ, ಪ್ರಸ್ತುತ ಕಾಲಘಟ್ಟದಲ್ಲಿ ಈ ದೇಶಕ್ಕೆ ಆಧ್ಯಾತ್ಮಿಕ ಚಿಂತನೆಯ ರಾಜಕಾರಣಿಗಳ ಅಗತ್ಯವಿದೆ. ಶಾಸನ ಸಭೆಯಲ್ಲಿ ರಾಮಕೃಷ್ಣ ಪರಮಹಂಸರ ಹೆಸರಿನಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದ ರತ್ನಾಕರ್ ಶ್ರೀಮಠದಿಂದ ಮಂತ್ರದೀಕ್ಷೆ ಪಡೆದು ಜೀವನದುದ್ದಕ್ಕೂ ಪ್ರಾಮಾಣಿಕತೆ ಮೆರೆದ ಅಪರೂಪದ ರಾಜಕಾರಣಿ ಎಂದು ಬಣ್ಣಿಸಿದರು.

ವಾಗ್ಮಿ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ರಾಜ್ಯ ರಾಜಕಾರಣದಲ್ಲಿ ಪರಿಸರ, ಕಲೆ, ಸಾಹಿತ್ಯದೊಂದಿಗೆ ತೀರ್ಥಹಳ್ಳಿ ಕ್ಷೇತ್ರವನ್ನು ಪ್ರತಿನಿಧಿಸಿದ ರಾಜಕಾರಣಿಗಳ ಪರಂಪರೆ ವಿಶಿಷ್ಟವಾಗಿದೆ. ಪಟಮಕ್ಕಿ ರತ್ನಾಕರ್ ಕುರಿತು ಬಂದಿರುವ ಕೃತಿ ಆಧ್ಯಾತ್ಮಿಕ ಚಿಂತನೆಯೊಂದಿಗೆ ರಾಜಕಾರಣಿಗಳು ಕಡ್ಡಾಯವಾಗಿ ಪಾಲಿಸಬೇಕಾದ ವಿಚಾರಗಳನ್ನು ಒಳಗೊಂಡಿದೆ ಎಂದು ತಿಳಿಸಿದರು.

ಬಾಹ್ಯಾಕಾಶ ವಿಜ್ಞಾನಿ ಡಾ. ಶಿವಾನಿ, ಚಿತ್ರ ಸಾಹಿತಿ ಕವಿರಾಜ್, ಪಿಯು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ರ‌್ಯಾಂಕ್ ಪಡೆದ ದೀಕ್ಷಾ, ಚಿತ್ರ ಕಲಾವಿದ ಮಂಜಣ್ಣ ನಾಯ್ಕ ಹಾಗೂ ಗಾಯಕ ಶಶಿಕುಮಾರ ಕಾರಂತ ಅವರನ್ನು ಗೌರವಿಸಲಾಯಿತು. ಶಾಸಕ ಆರಗ ಜ್ಞಾನೇಂದ್ರ, ಮಾಜಿ ಶಾಸಕರಾದ ಕಿಮ್ಮನೆ ರತ್ನಾಕರ್, ಬಿ.ಸ್ವಾಮಿರಾವ್, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್, ನೈಜಲಾ ಪಟಮಕ್ಕಿ ರತ್ನಾಕರ್, ಬಿ.ಗಣಪತಿ, ಉದಯಕುಮಾರ್, ಭೋಜರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net