ಶಿರ್ಲಾಲು ಗ್ರಾಮಸಭೆಯಲ್ಲಿ ಗದ್ದಲ : ಎರಡು ಗುಂಪುಗಳ ನಡುವೆ ಘರ್ಷಣೆ

sabhe
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಶಿರ್ಲಾಲು ಗ್ರಾಪಂ 2024-25 ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಗ್ರಾಪಂ ಅಧ್ಯಕ್ಷೆ ಉಷಾ ಎಂ. ಅಧ್ಯಕ್ಷತೆಯಲ್ಲಿ ಗ್ರಾಪಂ ಸಭಾಭವನದಲ್ಲಿ ಮಂಗಳವಾರ ನಡೆಯಿತು. ಮಾರ್ಗದರ್ಶಿ ಅಧಿಕಾರಿಯಾಗಿ ಸಮಾಜ ಕಲ್ಯಾಣ ಇಲಾಖೆ ಹೇಮಾಲತಾ ಭಾಗವಹಿಸಿದ್ದರು.

ಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಬಗ್ಗೆ ದೀರ್ಘ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ವಿಷಯ ಶಿರ್ಲಾಲು ದೇವಸ್ಥಾನದ ಬ್ರಹ್ಮಕಲಶದ ಹಣದ ವಿಚಾರದ ಕಡೆಗೆ ತಿರುಗಿ ಕುಶಾಲಪ್ಪ ಗೌಡ ಬೆಂಬಲಿಗರು ಮತ್ತು ನವೀನ್ ಸಾಮಾನಿ ಬೆಂಬಲಿಗರ ನಡುವೆ ಆರೋಪ, ಪ್ರತ್ಯಾರೋಪಗಳು ನಡೆದು ತೀವ್ರ ಗೊಂದಲ ಉಂಟಾಯಿತು. ಒಂದು ಹಂತದಲ್ಲಿ ವೈಯಕ್ತಿಕ ಟೀಕೆಗಳು, ನಿಂದನೆಗಳು ನಡೆದಾಗ ಪರಿಸ್ಥಿತಿ ಬಿಗಡಾಯಿಸಿತು. ಪರಸ್ಪರ ಕೈ ಮಿಸಲಾಯಿಸಿ, ತಳ್ಳಾಟ ನಡೆದು, ಹೊಡೆದಾಟಕ್ಕೆ ಕಾರಣವಾಯಿತು. ಅಧ್ಯಕ್ಷೆ, ನೋಡಲ್ ಅಧಿಕಾರಿ, ಬೀಟ್ ಪೊಲೀಸರು ಎರಡು ಗುಂಪುಗಳನ್ನು ಸಮಾಧಾನಪಡಿಸಿದರು.

ಆರಂಭದಲ್ಲಿ ಕುಶಾಲಪ್ಪ ಗೌಡ ತನ್ನನ್ನು ಸಭೆಯಿಂದ ಹೊರಗೆ ಹಾಕಲಾಗಿದೆ ಎಂದು ಕಳೆದ ಸಭೆಯ ವಿಷಯ ಪ್ರಸ್ತಾಪಿಸಿ, ಮಾಜಿ ಅಧ್ಯಕ್ಷ ತಾರಾನಾಥ ಗೌಡ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದಾಗ ತೀವ್ರ ಚರ್ಚೆ ನಡೆಯಿತು. ಆರೋಪ-ಪ್ರತ್ಯಾರೋಪಗಳು ನಡೆದು ಮುಂದಿನ ಎಲ್ಲ್ಲ ಬೆಳವಣಿಗೆಗೆ ಕಾರಣವಾಯಿತು. ಪರಿಸ್ಥಿತಿ ಸಹಜ ಸ್ಥಿತಿಗೆ ಬಂದ ನಂತರ ಸಭೆ ಮುಂದುವರಿಯಿತು. ಎರಡು ಕಡೆಯ ತಲಾ ಇಬ್ಬರು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾದರು.

ನಂತರ ನಡೆದ ಸಭೆಯಲ್ಲಿ ಹಲವು ವಿಷಯಗಳ ಕುರಿತು ಚರ್ಚೆ ನಡೆಯಿತು. ಪಂಚಾಯಿತಿ ವತಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ಪ್ರೋತ್ಸಾಹ ಧನದ ಕುರಿತಾದ ಮಾಹಿತಿಗಳ ಬಗ್ಗೆ ಪಂಚಾಯಿತಿ ವತಿಯಿಂದ ಮಾಹಿತಿ ನೀಡುವ ಕೆಲಸವಾಗಬೇಕು ಎಂದು ಬಾಬು ಎರ್ಮೆತ್ತೋಡಿ ಹೇಳಿದರು.

ಕೊಡಂಗೆಯಲ್ಲಿ ಅರ್ಧ ಕಿಲೋ ಮೀಟರ್‌ನಷ್ಟು ದೂರ ಚರಂಡಿ ನೀರು ಕಾಂಕ್ರೀಟ್ ರಸ್ತೆ ಮೇಲೆ ಹೋಗುತ್ತಿದೆ. ಶಿರ್ಲಾಲು-ಬೆಳ್ತಂಗಡಿ ರಸ್ತೆ ಹಾದು ಹೋಗುವ ಬೈರವ ಗುಂಡಿ ಬಳಿ ಇರುವ ಸೇತುವೆಯಲ್ಲಿ ನೀರು ಹೋಗುವುದಕ್ಕೆ ಜಾಗವಿಲ್ಲ. ನೀರು ಸೇತುವೆ ಮೇಲಿಂದ ಹೋಗುತ್ತಿದೆ ಎಂದು ಗ್ರಾಮಸ್ಥರೋರ್ವರು ಪಂಚಾಯಿತಿಗೆ ತಿಳಿಸಿದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾತನಾಡಿ, ಈ ಸೇತುವೆ ಲೋಕೋಪಯೋಗಿ ಇಲಾಖೆ ಸಂಬಂಧ ಪಟ್ಟಿದ್ದು, ಈಗಾಗಲೇ ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದೆ ಎಂದರು.

ಸಮಸ್ಯೆಗಳ ವಿಚಾರವಾಗಿ ಅರ್ಜಿಗಳನ್ನು ಬರೆದು ಸಾಕಾಗಿದೆ ಯಾವುದೇ ಪ್ರಯೋಜನ ಆಗಿಲ್ಲ. ಬೀದಿ ನಾಯಿಗಳ ಸಮಸ್ಯೆ ಬಹಳ ಇದೆ. ಶಾಲಾ ಮಕ್ಕಳು ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಪ್ರಕೃತಿ ವಿಕೋಪದಿಂದ ಹಾನಿಯಾದ ಮನೆಗಳಿಗೆ ತುರ್ತು ಪರಿಹಾರ ಕೊಡುವ ಕೆಲಸ ಆಗಬೇಕು. ತಡವಾಗಿ ಪರಿಹಾರದ ವ್ಯವಸ್ಥೆಗಳು ಆದರೆ ಅಲ್ಲಿಯವರೆಗೆ ಮನೆಯವರು ಎಲ್ಲಿಗೆ ಹೋಗಬೇಕು, ಏನು ಮಾಡಬೇಕು ಎಂದು ಅಶ್ರಫ್ ಪ್ರಶ್ನಿಸಿದರು.

ಪಂಚಾಯಿತಿ ಉಪಾಧ್ಯಕ್ಷ ಸೋಮನಾಥ ಬಂಗೇರ, ಸದಸ್ಯರಾದ ಮಮತಾ ಜೈನ್, ಮಾಧವ, ಕೊರಗಪ್ಪ, ಗೀತಾ, ಜ್ಯೋತಿ ಪೂಜಾರಿ, ಸುಶೀಲ, ಗೀತಾ, ಪ್ರಕಾಶ್ ಹೆಗ್ಡೆ, ತಾರಾನಾಥ ಗೌಡ, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಪಂ.ಅಭಿವೃದ್ಧಿ ಅಧಿಕಾರಿ ಸುಶೀಲ ಸ್ವಾಗತಿಸಿದರು. ಅನುಪಾಲನ ವರದಿ ವಾಚಿಸಿದರು. ಪಂಚಾಯಿತಿ ಸಿಬ್ಬಂದಿ ಪವಿತಾ ಜಮಾ ಖರ್ಚು ವಿವರ ಮಂಡಿಸಿದರು.

ಮೆಸ್ಕಾಂ ಕಾರ್ಯಕ್ಕೆ ಪ್ರಶಂಸೆ

ಮಳೆಗಾಲದಲ್ಲಿ ಮೆಸ್ಕಾಂ ಇಲಾಖೆ ಉತ್ತಮ ಕಾರ್ಯ ನಿರ್ವಹಿಸುತ್ತಿದೆ ಎಂದು ಕುಶಾಲಪ್ಪ ತಿಳಿಸಿದರು. ಮೆಸ್ಕಾಂ ಇಲಾಖೆಗೆ ಸಂಬಂಧ ಪಟ್ಟಂತಹ ಸಮಸ್ಯೆ ಬಗ್ಗೆ ಗ್ರಾಮಸ್ಥರು ಮೆಸ್ಕಾಂ ಇಲಾಖೆಗೆ ತಿಳಿಸಿದರು. ಜನ ಸಾಮಾನ್ಯರು ಸರ್ವರ್ ಸಮಸ್ಯೆಯಿಂದ ಪಡಿತರಕ್ಕಾಗಿ ಬೆಳಗ್ಗಿನಿಂದ ಸಂಜೆವರೆಗೆ ಕಾಯಬೇಕಾಗಿದೆ. ಇದಕ್ಕೆ ಸರಿಯಾದ ವ್ಯವಸ್ಥೆ ಆಗಬೇಕು. ಪೈಪ್‌ಲೈನ್ ಮೂಲಕ ನೀರಿನ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ ಎಂದು ಗ್ರಾಮಸ್ಥರು ಆರೋಪಿದರು. ಬಡ್ದ್‌ಗುತ್ತು ಸಂಜೀವ ಪೂಜಾರಿ ಅವರ ಮನೆ ಬಳಿಯಿರುವ ಟಿಸಿ, ಸಿಡಿಲು ಬಡಿಯುವ ಸಂದರ್ಭ ತೊಂದರೆಗಳು ಆಗುತ್ತಿದೆ. ಇದನ್ನು ಸ್ಥಳಾಂತರ ಮಾಡಬೇಕು ಎಂದು ಶೀನಪ್ಪ ಶಿರ್ಲಾಲು ಮೆಸ್ಕಾಂ ಇಲಾಖೆಗೆ ತಿಳಿಸಿದರು.

ಅಕೇಶಿಯ ಮರದಿಂದ ಸಮಸ್ಯೆ

ಸರ್ಕಾರ ಅಕೇಶಿಯ ಮರಗಳನ್ನು ನೆಡಲು ಅವಕಾಶವಿಲ್ಲ ಎಂದು ಹೇಳಿದೆ ಹಾಗೂ ಅದನ್ನು ಕಡಿಯಲು ಆದೇಶ ಹೊರಡಿಸಿದೆ. ಶಿರ್ಲಾಲುವಿನಲ್ಲಿ ಕೆಲವೊಂದು ಭಾಗದಲ್ಲಿ ಅಕೇಶಿಯ ಮರಗಳು ಇದ್ದು ಇದರಿಂದ ನೀರಿನ ಸಮಸ್ಯೆ ಉಂಟಾಗುತ್ತದೆ ಎಂದು ಗ್ರಾಮಸ್ಥರೋರ್ವರು ಅರಣ್ಯ ಇಲಾಖಾಧಿಕಾರಿಗಳಲ್ಲಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net