

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಶಿರಾಡಿಯಿಂದ ಶಿರ್ವತ್ತಡ್ಕಕ್ಕೆ ಸಂಪರ್ಕ ಕಲ್ಪಿಸುವ ಜಿಪಂ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡ ನಿರ್ಮಾಣಗೊಂಡಿದ್ದು, ವಾಹನ ಸವಾರರು ಸಂಕಷ್ಟದಿಂದ ಸಂಚರಿಸುವ ದುಸ್ಥಿತಿ ನಿರ್ಮಾಣಗೊಂಡಿದೆ. ಗ್ರಾಮಸ್ಥರು ಹೊಂಡಗಳಲ್ಲಿ ಬಾಳೆಗಿಡಗಳನ್ನು ನೆಟ್ಟು ಪ್ರತಿಭಟಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿರಾಡಿ ಗ್ರಾಮದ ಶಿರ್ವತ್ತಡ್ಕ- ಪದಂಬಳ ಎಂಬಲ್ಲಿ ಶಿರಾಡಿ ಗ್ರಾಪಂ ನಿಂದ ನಿರ್ಮಾಣಗೊಂಡ ಘನತ್ಯಾಜ್ಯ ಘಟಕ ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ ನಡೆದಿದ್ದು, ಘನತ್ಯಾಜ್ಯ ಘಟಕಕ್ಕೆ ಶಿರಾಡಿಯಿಂದ ಇದೇ ರಸ್ತೆ ಮೂಲಕ ಸಾಗಬೇಕಾಗಿದೆ. ಈ ಸಂದರ್ಭ ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಪ್ರತಿಭಟಿಸುವ ಮೂಲಕ ಗ್ರಾಮಸ್ಥರು ರಸ್ತೆ ಅವ್ಯವಸ್ಥೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಶಿರಾಡಿಯಿಂದ- ಶಿರ್ವತ್ತಡ್ಕಕ್ಕೆ 4 ಕಿ.ಮೀ. ಉದ್ದದ ಜಿಪಂ. ರಸ್ತೆ ಡಾಂಬರುಗೊಂಡು 18 ವರ್ಷ ಆಗಿದೆ. ಆ ಬಳಿಕ ಒಂದೆರಡು ಸಲ ತೇಪೆ ಕಾಮಗಾರಿ ನಡೆದಿರುವುದನ್ನು ಹೊರತುಪಡಿಸಿದರೆ ಮರು ಡಾಂಬರುಗೊಂಡಿಲ್ಲ. ಇದೀಗ ರಸ್ತೆಯಲ್ಲಿನ ಡಾಂಬರು ಎದ್ದು ಹೋಗಿದ್ದು ರಸ್ತೆಯಲ್ಲಿ ದೊಡ್ಡ ದೊಡ್ಡ ಹೊಂಡ ನಿರ್ಮಾಣಗೊಂಡು ಜನ ಹಾಗೂ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಶಿರಾಡಿ- ಶಿರ್ವತ್ತಡ್ಕ ರಸ್ತೆ ಮರು ಡಾಂಬರು ನಡೆಸಲು ಕ್ಷೇತ್ರದ ಶಾಸಕರಿಗೆ, ಸಂಸದರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ, ಬೇರೆ ಬೇರೆ ಇಲಾಖೆ ಸಚಿವರಿಗೆ ಮನವಿ ಸಲ್ಲಿಸುತ್ತಲೇ ಇದ್ದೇವೆ. ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ತುಂಬಿರುವುದರಿಂದ ಜನರಿಗೆ ಸಂಚಾರಕ್ಕೆ ಕಷ್ಟವಾಗಿರುವ ಬಗ್ಗೆ ದೂರುಗಳು ಬಂದಿವೆ. ಗ್ರಾ.ಪಂ.ನಿಂದ ಒದಗಿಸಬಹುದಾದ ಅನುದಾನದಲ್ಲಿ ಕಳೆದ ವರ್ಷ ಚರಂಡಿ ದುರಸ್ತಿ ಮಾಡಿದ್ದೇವೆ. ಹೊಂಡಗಳಿಗೆ ಮಣ್ಣು ತುಂಬಿಸುವ ಕಾಮಗಾರಿ ಮಾಡಿದ್ದೇವೆ. ಆದರೆ ಮಳೆಯಿಂದಾಗಿ ಇವೆಲ್ಲವೂ ಎದ್ದು ಹೋಗಿ ಮತ್ತೆ ಹೊಂಡ ನಿರ್ಮಾಣಗೊಂಡಿದೆ. ಕಾರ್ತಿಕೇಯನ್ ಶಿರಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಸ್ತೆ ಸಂಪೂರ್ಣ ಕೆಟ್ಟು ಹೋಗಿದ್ದು ಸಂಚಾರ ಮಾಡುವುದೇ ಕಷ್ಟವಾಗಿದೆ. ಅಂಗನವಾಡಿ, ಶಾಲಾ- ಕಾಲೇಜಿಗೆ ಹೋಗುವ ನೂರಾರು ಮಕ್ಕಳು ಈ ರಸ್ತೆ ಬಳಸುತ್ತಿದ್ದಾರೆ. ಈ ಭಾಗದ 750ಕ್ಕೂ ಹೆಚ್ಚಿನ ಕುಟುಂಬಗಳಿಗೆ ಅಗತ್ಯ ಕೆಲಸಗಳಿಗೆ ಪೇಟೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ. ಸಂಬಂಧಪಟ್ಟವರು ಗಮನಹರಿಸಿ ರಸ್ತೆಯ ಕಾಂಕ್ರೀಟ್ ಅಥವಾ ಮರು ಡಾಂಬರಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಮನೋಜ್ ಶಿರಾಡಿ, ಗ್ರಾಮಸ್ಥರು