

ಶಿವಮೊಗ್ಗ: ಕಾಂಗ್ರೆಸ್ ವಿಸರ್ಜನೆ ಮಾಡಬೇಕೆಂದು ಮಹಾತ್ಮ ಗಾಂಧಿ ಅಂದು ಹೇಳಿದ್ದನ್ನು ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ರಾಜ್ಯದಲ್ಲಿ ಇಂದು ಜಾರಿಗೆ ತರುತ್ತಿದ್ದಾರೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು.
ಹಿಂದೆ ಕಾಂಗ್ರೆಸ್ನಲ್ಲಿ ಮಾದರಿ ಎನ್ನಬಹುದಾದ ಮಾಹಾತ್ಮ ಗಾಂಧಿ, ಸುಭಾಷ್ಚಂದ್ರ ಬೋಸ್, ತಿಲಕರು ಮುಂತಾದ ನಾಯಕರಿದ್ದರು. ಅವರ ಹಿಂದೆ ಜನರೂ ಇದ್ದರು. ಆದರೆ ಈಗ ಕೇವಲ ನಾಯಕರು ಮಾತ್ರ ಉಳಿದುಕೊಂಡಿದ್ದಾರೆ. ಅವರೂ ಪರಸ್ಪರ ಬಡಿದಾಡಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಲೋಕಸಭಾ ಚುನಾವಣೆ, ಅದಕ್ಕೂ ಮುನ್ನ ನಡೆದ ವಿಧಾನಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಕಾಂಗ್ರೆಸ್ ರಾಜ್ಯದಲ್ಲಿ ಇನ್ನೂ ಇದೆ ಎಂದು ಮಲ್ಲಿಕಾರ್ಜುನ ಖರ್ಗೆ ಭ್ರಮೆಯಲ್ಲಿದ್ದಾರೆ. ಈಗಾಗಲೇ ಕಾಂಗ್ರೆಸ್ ನಿರ್ನಾಮವಾಗಿದೆ ಎಂದರು.