ಪತ್ನಿಯ ಕ್ರೌರ್ಯತೆ ಆಧಾರದ ಮೇಲೆ ಕೋರ್ಟ್​ನಿಂದ ಕ್ರಿಕೆಟಿಗ ಶಿಖರ್​ ಧವನ್​ಗೆ ಡಿವೋರ್ಸ್​ ಮಂಜೂರು

Shikhar Dhawan 1
Published on

ನವದೆಹಲಿ: ಟೀಮ್​ ಇಂಡಿಯಾದ ಕ್ರಿಕೆಟಿಗ ಶಿಖರ್​ ಧವನ್​ ಅವರಿಗೆ ದೆಹಲಿಯ ಪಟಿಯಾಲ ಹೌಸ್ ಕಾಂಪ್ಲೆಕ್ಸ್‌ನಲ್ಲಿರುವ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ಮಂಜೂರು ಮಾಡಿದ್ದು, ಕೌಟುಂಬಿಕ ಕಲಹದಿಂದ ದೂರವಾಗಿದ್ದ ಪತ್ನಿ ಆಯೇಷಾ ಮುಖರ್ಜಿಯಿಂದ ಅಧಿಕೃತವಾಗಿ ಬೇರೆಯಾಗಿದ್ದಾರೆ.

ಧವನ್​ ಮತ್ತು ಆಯೇಷಾ 2012ರ ಅಕ್ಟೋಬರ್​ ತಿಂಗಳಲ್ಲಿ ಮದುವೆಯಾದರು. ಆಸ್ಟ್ರೇಲಿಯಾದ ಮೆಲ್ಬೋರ್ನ್​ ಮೂಲದ ಕಿಕ್​ಬಾಕ್ಸರ್​ ಆಗಿರುವ ಆಯೇಷಾ, ಧವನ್ ಅವ​ರನ್ನು ಪ್ರೀತಿಸಿ ಮದುವೆಯಾದರು.

ಧವನ್​ ಅವರು ತಮ್ಮ ಪತ್ನಿಯ ವಿರುದ್ಧ ದಾಖಲಿಸಿದ ವಿಚ್ಛೇದನ ಅರ್ಜಿಯಲ್ಲಿ ಮಾಡಿರುವ ಎಲ್ಲ ಆರೋಪಗಳನ್ನು ನ್ಯಾಯಾಧೀಶರಾದ ಹರೀಶ್ ಕುಮಾರ್ ಅವರು ಸ್ವೀಕರಿಸಿದರು. ಧವನ್​ ಮಾಡಿದ ಎಲ್ಲ ಆರೋಪಗಳನ್ನು ಪತ್ನಿ ಆಯೇಷಾ ವಿರೋಧಿಸಲಿಲ್ಲ ಮತ್ತು ತಮ್ಮನ್ನು ಸಮರ್ಥಿಸಿಕೊಳ್ಳಲು ವಿಫಲರಾದ್ದರಿಂದ ಧವನ್​ ಅವರಿಗೆ ಡಿವೋರ್ಸ್​ ಮಂಜೂರಾಯಿತು.

ವರ್ಷಗಳವರೆಗೆ ಮಗನನ್ನು ತಂದೆಯಿಂದ ದೂರವಿರಿಸಿ ಮಾನಸಿಕ ಯಾತನೆ ಅನುಭವಿಸುವಂತೆ ಮಾಡಿದ್ದಾರೆ ಎಂದು ಶಿಖರ್​ ಧವನ್​ ಅವರು ತಮ್ಮ ಪತ್ನಿ ಆಯೇಷಾ ವಿರುದ್ಧ ಅರ್ಜಿಯಲ್ಲಿ ದೂರಿದ್ದರು. ಇದನ್ನು ಪರಿಗಣಿಸಿದ ನ್ಯಾಯಾಧೀಶ ಹರೀಶ್‌ ಕುಮಾರ್‌, ಡಿವೋರ್ಸ್​ ಮಂಜೂರು ಮಾಡಿದ್ದಾರೆ.

ಅಂದಹಾಗೆ ಆಯೇಷಾ ಅವರು ಧವನ್​ಗಿಂತ 12 ವರ್ಷ ದೊಡ್ಡವರು. ಈಗಾಗಲೇ ಆಸ್ಟ್ರೇಲಿಯಾ ಮೂಲದ ಉದ್ಯಮಿಯನ್ನು ಮದುವೆಯಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ಸಹ ಇದ್ದಾರೆ. ಮೊದಲ ಪತಿಯಿಂದ ದೂರವಾದ ಬಳಿಕ ಆಯೇಷಾ, ಧವನ್​ರನ್ನು ಪ್ರೀತಿಸಿ ಮದುವೆಯಾದರು. ಇಬ್ಬರ ವೈವಾಹಿಕ ಜೀವನಕ್ಕೆ ಸಾಕ್ಷಿಯಾಗಿ ಜೊರಾವರ್​ ಹೆಸರಿನ ಓರ್ವ ಮಗನಿದ್ದಾನೆ. ಸದ್ಯ ಆಯೇಷಾ ಅವರು ಇಬ್ಬರು ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗನೊಂದಿಗೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದಾರೆ.

ಧವನ್‌ನಿಂದ ಬೇರೆಯಾಗಿರುವ ಸಂಗತಿಯನ್ನು 2021ರಲ್ಲಿ ಇನ್​ಸ್ಟಾಗ್ರಾಂ ಪೋಸ್ಟ್ ಮೂಲಕ ಆಯೇಷಾ ದೃಢಪಡಿಸಿದರು. ಆಯೇಷಾ ಅವರು ಭಾರತದಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಆಸ್ಟ್ರೇಲಿಯಾದಲ್ಲಿ ತಮ್ಮ ಶಿಕ್ಷಣವನ್ನು ಮುಂದುವರೆಸಿದರು. ಆಯೇಷಾ ಅವರು ಕ್ರೀಡೆ ಮತ್ತು ಫಿಟ್ನೆಸ್ ಉತ್ಸಾಹಿಯಾಗಿದ್ದಾರೆ. ಟ್ಯಾಟೂಗಳನ್ನು ತುಂಬಾ ಇಷ್ಟಪಡುತ್ತಾರೆ. ಮಗಳ ಹೆಸರನ್ನು ಒಳಗೊಂಡಂತೆ ಅವರ ತೊಳಗಳ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net