

ಗದಗ: ವಾಣಿಜ್ಯ ತೆರಿಗೆ ಇಲಾಖೆ ಕಾರ್ಯದರ್ಶಿಗಳು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಸಿ.ಶಿಖಾ ಅವರು ಶನಿವಾರ ಜಿಲ್ಲೆಯ ವಿವಿಧ ಸರ್ಕಾರಿ ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹುಲಕೋಟಿ ಗ್ರಾಮದ ಕೆ.ಎಚ್.ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ಕಟ್ಟಡ ವಿನ್ಯಾಸದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಕಾಲೇಜಿನ ಕಾರ್ಯ ವೈಖರಿ ಕುರಿತು ಪ್ರಾಂಶುಪಾಲರದಾ ಡಾ.ಶಿವಪ್ಪ ಕುರಿ ಅವರಿಂದ ಮಾಹಿತಿ ಪಡೆದರು. ಸರ್ಕಾರಿ ಪದವಿ ಕಾಲೇಜು ಸಹ ಈ ಮಟ್ಟಿಗೆ ಸುಸಜ್ಜಿತವಾಗಿರುವದನ್ನು ಶ್ಲಾಘಿಸಿದ ಅವರು ಈ ಕಾಲೇಜಿನಲ್ಲಿ ವಿಧ್ಯಾರ್ಥಿಗಳಿಗೆ ಇರುವ ವಿವಿಧ ಕೋರ್ಸುಗಳು ಹಾಗೂ ಅಗತ್ಯವಿರುವ ಕೋರ್ಸುಗಳ ಕುರಿತು ಅಲ್ಲದೇ ಪ್ರತಿ ತರಗತಿಯಲ್ಲಿ ಅಧ್ಯಯನ ನಡೆಸುತ್ತಿರುವ ವಿಧ್ಯಾರ್ಥಿಗಳ ಸಂಖ್ಯೆ ಕುರಿತು ಚರ್ಚಿಸಿದರು. ಹುಲಕೋಟಿ ಪದವಿ ಕಾಲೇಜಿಗೆ ಆಗಮಿಸುವ ಸುತ್ತಲಿನ ವಿವಿಧ ಗ್ರಾಮಗಳ ವಿಧ್ಯಾರ್ಥಿಗಳಿಗೆ ಇರುವ ಸಾರಿಗೆ ವ್ಯವಸ್ಥೆ ಕುರಿತು ಮಾಹಿತಿ ಪಡೆದ ಅವರು ಪದವಿ ಕಾಲೇಜಿನಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರಕುತ್ತಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಮುಕ್ತಿವನ: ಹುಲಕೋಟಿಯ ಮುಕ್ತಿವನಕ್ಕೆ ಭೇಟಿ ನೀಡಿದ ಅವರು ಅಲ್ಲಿನ ಸ್ವಚ್ಛ, ಸುಂದರ ಪರಿಸರವನ್ನು ಹಾಗೂ ಉತ್ತಮ ನಿರ್ವಹಣೆ ಮಾಡುತ್ತಿರುವ ಕುರಿತು ಗ್ರಾಮ ಪಂಚಾಯತ ಕಾರ್ಯನಿರ್ವಹಣೆಯನ್ನು ಶ್ಲಾಘಿಸಿದರು. ಹುಲಕೊಟಿಯಲ್ಲಿ ನಿರ್ಮಾಣಗೊಂಡಿರುವ ಮುಕ್ತಿವನವು ಜಿಲ್ಲೆಗೆ ಮಾದರಿಯಾಗಿದ್ದು ಇತರೆಡೆಗೂ ಅತ್ಯಾಧುನಿಕ ಸೌಲಭ್ಯಗಳ ಮುಕ್ತಿವನ ನಿರ್ಮಿಸಬೇಕೆಂದು ಹೇಳಿದರು.
ಪಿಂಕ ಶೌಚಾಲಯ: ಹುಲಕೊಟಿಯ ಕೆ.ಎಚ್.ಪಾಟೀಲ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಿರ್ಮಾಣಗೊಂಡಿರುವ ಪಿಂಕ್ ಶೌಚಾಲಯದ ಪರಿಕಲ್ಪನೆ ಕುರಿತು ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರಿಂದ ಮಾಹಿತಿ ಪಡೆದು ಶೌಚಾಲಯ ನಿರ್ಮಾಣದ ಉದ್ದೇಶ ಹಾಗೂ ಬಾಲಕೀಯರು ಶೌಚಾಲಯ ಬಳಕೆ ಕುರಿತು ಅಭಿಪ್ರಾಯ ಪಡೆದರು. ಪಿಂಕ್ ಶೌಚಾಲಯ ಪರಿಕಲ್ಪನೆಯು ಉತ್ತಮ ಯೋಜನೆಯಾಗಿದ್ದು ಬಾಲಕಿಯರಿಗೆ ಶೌಚಾಲಯ ಬಳಕೆ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ಅಂಗನವಾಡಿ ಭೇಟಿ: ಹುಲಕೋಟಿಯ ಅಂಗನವಾಡಿ ಕೇಂದ್ರ ನಂ.3ಕ್ಕೆ ಭೇಟಿ ನೀಡಿದ ಅವರು ಅಂಗನವಾಡಿ ಸ್ವಚ್ಛತೆ ಕುರಿತು ವೀಕ್ಷಿಸಿದರು. ನಂತರ ಅಂಗನವಾಡಿ ಶಿಕ್ಷಕಿಯರಿಗೆ ಮೊದಲ ಹಂತದ ತರಬೇತಿ ಆಗಿರುವ ಕುರಿತು ಖಚಿತ ಪಡಿಸಿಕೊಂಡು ಎನ್.ಇ.ಪಿ ಅಳವಡಿಕೆ ಕುರಿತು ಹಾಗೂ ಮಕ್ಕಳು ಕ್ರಿಯಾಶೀಲವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಕುರಿತು ಸ್ವತಹ ತಾವೇ ಮಕ್ಕಳೊಂದಿಗೆ ಸಂವಹನ ನಡೆಸಿದರು.
ತದನಂತರ ಹುಲಕೋಟಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಸತಿ ನಿಲಯಕ್ಕೆ ಭೇಟಿ ನೀಡಿ ಅಲ್ಲಿರುವ ಸಿಬ್ಬಂದಿಗಳು ಹಾಗೂ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕುರಿತು ಪರಿಶೀಲಿಸಿದರು. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ವಸತಿ ನಿಲಯದಲ್ಲಿ ವಿಧ್ಯಾರ್ಥಿಗಳಿಗೆ ಗುಣಮಟ್ಟದ ಆಹಾರ ಲಭ್ಯವಾಗಬೇಕು. ಈ ಕುರಿತು ಮೇಲಾಧಿಕಾರಿಗಳು ನಿಯಮಿತವಾಗಿ ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಬಿಂಕದಕಟ್ಟಿ ಗ್ರಾಮದಲ್ಲಿನ ಡಿಜಿಟಲ್ ಗ್ರಂಥಾಲಯ, ಬಾಪೂಜಿ ಸೇವಾ ಕೇಂದ್ರ, ಆರೋಗ್ಯ ಉಪ ಕೇಂದ್ರ, ಪಶು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಯವೈಖರಿ ಬಗ್ಗೆ ಮಾಹಿತಿ ಪಡೆದರು. ಸರ್ಕಾರಿ ಯೋಜನೆಗಳ ಹಾಗೂ ಸೌಲಭ್ಯಗಳು ಅರ್ಹರಿಗೆ ತಲುಪಿಸುವ ಮೂಲಕ ಆರ್ಥಿಕ ಬಲವರ್ಧನೆಗೆ ಮುಂದಾಗುವಂತೆ ತಿಳಿಸಿದರು.
ತದನಂತರ ಗದಗ ನಗರದ ಗಂಗಿಮಡಿ ವಸತಿ ಯೋಜನೆಯ ಮನೆಗಳನ್ನು ವೀಕ್ಷಿಸಿದರು. ಶಹರದ ವಕಾರ ಸಾಲುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳು ಮುಂದಾಗಬೇಕು. ಸರ್ಕಾರದ ಅನುದಾನ ಸದ್ಬಳಕೆ ಆಗುವಂತೆ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಹುಲಕೋಟಿ ಗ್ರಾಮ ಪಂಚಾಯತ ಅಧ್ಯಕ್ಷೆ ನಾಗರತ್ನ ಬೆಳ್ಳೊಳ್ಳಿಮಠ, ಸದಸ್ಯರಾದ ಸಿ.ಬಿ.ಕಳಕಟ್ಟೆ, ಮೋಹನ ದುರಗನ್ನವರ, ಏಕನಾಥ ಕರಿರಾಯನಗೌಡರ, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ಉಪವಿಭಾಗಾಧಿಕಾರಿ ವೆಂಕಟೇಶ ನಾಯ್ಕ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ನಿರ್ಮಿತಿ ಕೇಂದ್ರದ ವ್ಯವಸ್ಥಾಪಕ ಗಂಗಾಧರ ಶಿರೋಳ, ಪಿ.ಆರ್.ಇ.ಡಿ. ಕಾರ್ಯಪಾಲಕ ಅಭಿಯಂತರ ಶಿವಾನಂದ ಗೌಡರ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೀತಮ್ ಖೋತ, ಶಿಶು ಅಭಿವೃದ್ಧಿ ಅಧಿಕಾರಿ ಹುಲಿಗೆಮ್ಮ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ರವಿ ಗುಂಜಿಕರ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಾರುತಿ ಬ್ಯಾಕೋಡ, ಪೌರಾಯುಕ್ತ ರಮೇಶ ಸುಣಗಾರ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಜರಿದ್ದರು.