

ಟೊರಾಂಟೊ: ಇತ್ತೀಚೆಗೆ ವಿಂಬಲ್ಡನ್ ಪ್ರಶಸ್ತಿ ಗೆದ್ದು ಟೆನಿಸ್ ಜಗತ್ತಿನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ವಿಶ್ವ ನಂ. 1 ಆಟಗಾರ ಸ್ಪೇನ್ನ ಕಾಲೋಸ್ ಅಲ್ಕರಾಜ್ ಅವರಿಗೆ ಇತ್ತೀಚೆಗೆ ಅದಕ್ಕಿಂತಲೂ ಸಂಭ್ರಮದ ಕ್ಷಣ ಎದುರಾಗಿತ್ತು. ಅದು ಅವರ 'ಕ್ರಷ್' ಅನ್ನು ಭೇಟಿಯಾದ ಕ್ಷಣವಾಗಿತ್ತು!
ಹೌದು, 20 ವರ್ಷದ ಅಲ್ಕರಾಜ್ ಕಳೆದ ಬುಧವಾರ ಟೊರಾಂಟೊದಲ್ಲಿ ಮಾಜಿ ವಿಶ್ವ ನಂ. 1 ಆಟಗಾರ್ತಿ ಆಗಿರುವ ರಷ್ಯಾದ ಮರಿಯಾ ಶರಪೋವಾರನ್ನು ಭೇಟಿಯಾದರು. ಈ ವೇಳೆ ಶರಪೋವಾ ತನ್ನ ಕ್ರಷ್ ಎಂದು ಹೇಳಿ ಅಲ್ಕರಾಜ್ ಸಂಭ್ರಮಿಸಿದ್ದಾರೆ.
"ನಾನು ಟೆನಿಸ್ ಆಡಲು ಆರಂಭಿಸಿದ ದಿನದಿಂದಲೂ ಶರಪೋವಾ ನನ್ನ ಕ್ರಷ್. ಆಕೆಯನ್ನು ಭೇಟಿಯಾಗಿದ್ದು ನನಗೆ ಅಪಾರ ಸಂತಸ ತಂದಿದೆ. ಆಕೆ ಅತ್ಯಂತ ಚಾರ್ಮಿಂಗ್. ವಿಂಬಲ್ಡನ್ ಪ್ರಶಸ್ತಿ ಗೆದ್ದಿರುವುದಕ್ಕೆ ನನ್ನನ್ನು ಅಭಿನಂದಿಸಿದರು' ಎಂದು ಅಲ್ಕರಾಜ್ ಹೇಳಿದ್ದಾರೆ. 36 ವರ್ಷದ ಶರಪೋವಾ 2004ರಲ್ಲಿ 17ನೇ ವಯಸ್ಸಿನಲ್ಲೇ ವಿಂಬಲ್ಡನ್ ಪ್ರಶಸ್ತಿ ಗೆದ್ದಿದ್ದರು. ಬಳಿಕ 18ನೇ ವಯಸ್ಸಿನಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ್ದರು. ಎಲ್ಲ 4 ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆದ್ದ ಅಪರೂಪದ ಸಾಧಕಿಯಲ್ಲಿ ಒಬ್ಬರಾಗಿದ್ದಾರೆ.
ಮುಂಬರುವ ಯುಎಸ್ ಓಪನ್ ಗ್ರಾಂಡ್ ಸ್ಲಾಂನಲ್ಲಿ ಅಲ್ಕರಾಜ್ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿಯಲಿದ್ದಾರೆ. ಅವರಿಲ್ಲಿ ಕಳೆದ ವರ್ಷ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ವಿಂಬಲ್ಡನ್ ಗೆಲುವಿನ ಬಳಿಕ ಕೆನಡ ಓಪನ್ ಮೂಲಕ ಅವರು ಮರಳಿ ಕಣಕ್ಕಿಳಿಯುತ್ತಿದ್ದಾರೆ.