ಬೆಟ್ಟಂಪಾಡಿ ಸಹಕಾರಿ ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು ಆಯ್ಕೆ

ayke
Published on

ಪುತ್ತೂರು ಗ್ರಾಮಾಂತರ: ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪೈಪೋಟಿ ನಡೆಯಿತು. ಬಿಜೆಪಿಯೊಳಗೆ ಒಮ್ಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಹರೀಶ್ ಗೌಡ ಗುಮ್ಮಟೆಗದ್ದೆ ಅವಿರೋಧ ಆಯ್ಕೆಯಾಗಿದ್ದಾರೆ.

ಸಂಘದ ಆಡಳಿತ ಮಂಡಳಿ ನಿರ್ದೇಶಕರ 12 ಸ್ಥಾನಗಳಿಗೂ ಇತ್ತೀಚೆಗೆ ಅವಿರೋಧ ಆಯ್ಕೆ ನಡೆದಿತ್ತು. ಆದರೆ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಹಾಗೂ ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಸಂಘದ ಮಾಜಿ ಅಧ್ಯಕ್ಷ ಕೊಮ್ಮಂಡ ಜಗನ್ನಾಥ ಶೆಟ್ಟಿ ನಡುವೆ ಪೈಪೋಟಿ ನಡೆದಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲದ ಮುಖಂಡರು ಮಾತುಕತೆ ನಡೆಸಿದ್ದರೂ ಒಮ್ಮತ ಮೂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಅವರಿಬ್ಬರನ್ನು ಬಿಟ್ಟು ಪ್ರಥಮ ಬಾರಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ದಿವಾಕರ ಬಲ್ಲಾಳ್ ಅವರನ್ನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಆದರೆ ಇದಕ್ಕೂ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಶ್ಚಿತವಾಗಿತ್ತು.

ಅಂತಿಮವಾಗಿ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ದಿವಾಕರ ಬಲ್ಲಾಳ್ ನಡುವೆ ಚುನಾವಣೆ ನಡೆದು ಶಶಿಕುಮಾರ್ ರೈ 9 ಮತ ಪಡೆದರು. ದಿವಾಕರ ಬಲ್ಲಾಳ್ 4 ಮತ ಪಡೆದರು.

ಸಹಕಾರ ಸಂಘಗಳ ಸಹಾಯಕ ನಿಬಂಧಕ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ರಾಮಯ್ಯ ರೈ.ಪಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net