ಸುಳ್ಳುಸುದ್ದಿ ಹಬ್ಬಿಸುವವರ ಮೇಲೆ ಕಾನೂನು ಕ್ರಮ ... ಶರ್ಮಿಳಾ ಎಚ್ಚರಿಕೆ

Sharmila Mandre - Final
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಶರ್ಮಿಳಾ ಮಾಂಡ್ರೆ, ಗುರುವಾರವಷ್ಟೇ ತಮಗೆ ಹಾಗೂ ತಮ್ಮ ಕುಟುಂಬದವರಿಗೆ ಕರೊನಾ ಪಾಸಿಟಿವ್​ ಇದೆ ಮತ್ತು ತಾವೆಲ್ಲಾ ಕ್ವಾರಂಟೈನ್​ನಲ್ಲಿ ಇರುವುದಾಗಿ ಸೋಷಿಯಲ್​ ಮೀಡಿಯಾ ಹೇಳಿಕೊಂಡಿದ್ದರು.

ಈಗ ಶರ್ಮಿಳಾ ಮಾಂಡ್ರೆ, ಅನವಶ್ಯಕವಾಗಿ ತಮ್ಮ ವಿರುದ್ಧ ಸುಳ್ಳುಸುದ್ದಿಗಳನ್ನು ಹರಡಿದರೆ, ತಾವು ಸಮ್ಮನಿರುವುದಿಲ್ಲ ಮತ್ತು ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಶರ್ಮಿಳಾ ಮಾಂಡ್ರೆ ಕಾರು ಅಪಘಾತವಾದ ಸಂದರ್ಭದಲ್ಲಿ, ಅವರ ಜತೆಗೆ ಡ್ರಗ್​ ಪೆಡ್ಲರ್​ ಒಬ್ಬ ಇದ್ದ ಎಂಬ ಗುಸುಗುಸು ಕೇಳಿ ಬಂದಿತ್ತು. ಅಷ್ಟೇ ಅಲ್ಲ, ಶರ್ಮಿಳಾ ಮಾಂಡ್ರೆ ಅವರ ಆಪ್ತ ಎನ್ನಲಾದ ಕಾರ್ತಿಕ್​ ಎನ್ನುವವರನ್ನು ಗುರುವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶರ್ಮಿಳಾ ವಿಷಯದಲ್ಲಿ ಹಲವು ಊಹಾಪೋಹಗಳು ಕೇಳಿ ಬರುತ್ತಿವೆ.

ಹಾಗೆ ತಮ್ಮ ಬಗ್ಗೆ ಸುಳ್ಳುಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿರುವ ಶರ್ಮಿಳಾ ಮಾಂಡ್ರೆ, ತಮ್ಮ ಮೌನವನ್ನು ದೌರ್ಬಲ್ಯ ಎಂದುಕೊಳ್ಳಬೇಡಿ ಎಂದು ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಶರ್ಮಿಳಾ, 'ನನ್ನ ಮೌನ ಎಲ್ಲರನ್ನೂ ಏನೇನೋ ಕಲ್ಪಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುತ್ತಿದೆ ಎಂದರೆ, ಇನ್ನು ಮುಂದೆ ನಾನು ಸುಮ್ಮನಿರುವುದಿಲ್ಲ. ನನ್ನ ಮೇಲೆ ಸುಳ್ಳುಸುದ್ದಿಗಳನ್ನು ಹಬ್ಬಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ' ಎಂದು ಅವರು ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net