ಷೇರುದಾರರು ಸಹಕಾರ ಸಂಘದ ಜೀವಾಳ

19sor2
ಸೊರಬದ ಆನವಟ್ಟಿಯಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯನ್ನು ಅಧ್ಯಕ್ಷ ಟಿ.ಬಿ.ರಾಜೇಂದ್ರ ನಾಯಕ ಉದ್ಘಾಟಿಸಿದರು. ಟಿ.ಎಸ್.ಕೊಟ್ರೇಶಪ್ಪ, ಜಗದೀಶ್, ರಾಜೇಂದ್ರಪ್ಪ ಇತರರಿದ್ದರು.
Published on

ಸೊರಬ: ರೈತರ ಆರ್ಥಿಕ ಜೀವನದಲ್ಲಿ ಸಹಕಾರ ಸಂಘಗಳು ಮುಖ್ಯ ಪಾತ್ರ ವಹಿಸುತ್ತವೆ ಎಂದು ಆನವಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಬಿ.ರಾಜೇಂದ್ರ ನಾಯಕ ಹೇಳಿದರು.

ತಾಲೂಕಿನ ಆನವಟ್ಟಿ ವೀರಶೈವ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಆನವಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಮಾತನಾಡಿ, ಷೇರುದಾರರು ಸಹಕಾರ ಸಂಘದ ಜೀವಾಳ ಆಗಿದ್ದು, ಸಂಘದ ಬೆಳವಣಿಗೆಯಲ್ಲಿ ಎಲ್ಲರೂ ಸಹಭಾಗಿತ್ವದಿಂದ ಕೈಜೋಡಿಸಿದಾಗ ಸಂಘದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಪ್ರಸ್ತುತ ನಮ್ಮ ಸಂಘವು 1,964 ಸದಸ್ಯರನ್ನು ಹೊಂದಿದ್ದು, 7 ಲಕ್ಷದ 28 ಸಾವಿರ ರೂ. ನಿವ್ವಳ ಲಾಭ ಗಳಿಸಿದೆ. 50 ಲಕ್ಷ ರೂ. ಅನುದಾನದಲ್ಲಿ ಸಂಘವು ಹೊಸ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಿದೆ. ಷೇರುದಾರರು ಹೆಚ್ಚು ಸಂಖ್ಯೆಯಲ್ಲಿ ಸದಸ್ಯರ ನೋಂದಣಿ ಮಾಡಿಸಬೇಕು ಎಂದರು.

ಆನವಟ್ಟಿ ವೃತ್ತದ ಕ್ಷೇತ್ರಾಧಿಕಾರಿ ಕೃಷ್ಣ ಮೂರ್ತಿ ಮಾತನಾಡಿ, ಷೇರುದಾರರು ಸಂಘದಲ್ಲಿ ಹೆಚ್ಚಿನ ಠೇವಣಿ ತೊಡಗಿಸಿದರೆ ಸ್ವಂತ ಬಂಡವಾಳದ ಆಧಾರದ ಮೇಲೆ ನಬಾರ್ಡ್ ಬ್ಯಾಂಕ್ ಹೆಚ್ಚಿನ ಸಾಲ ನೀಡಲು ಸಹಕಾರಿಯಾಗುತ್ತದೆ. ಕೃಷಿಯೇತರ ಚಟುವಟಿಕೆಗೆ ಸಹಕಾರ ಬ್ಯಾಂಕ್‌ಗಳು ಸಾಲ ಸೌಲಭ್ಯ ನೀಡುವುದರಿಂದ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.

ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎ.ಪಿ.ಹರ್ಷ ವಾರ್ಷಿಕ ವರದಿ ಮಂಡಿಸಿದರು. ಉಪಾಧ್ಯಕ್ಷ ಟಿ.ಎಸ್.ಕೊಟ್ರೇಶಪ್ಪ, ನಿರ್ದೇಶಕರಾದ ಜಗದೀಶ್, ರಾಜೇಂದ್ರಪ್ಪ, ಸೇತು ಮಾಧವ, ನಾಗರಾಜ್, ಪ್ರಭುಗೌಡ, ಕೃಷ್ಣಪ್ಪ, ಸುರೇಂದ್ರ ಗೌಡ, ಈರಪ್ಪ, ಗೌರಮ್ಮ, ಪುಷ್ಪಾವತಿ, ಸಿಬ್ಬಂದಿ ಕಿರಣ್ ಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net