

ಮುಂಬೈ: ಸೋಲಾರ್ ಪ್ಯಾನಲ್ ತಯಾರಿಕಾ ಕಂಪನಿ ಆಲ್ಪೆಕ್ಸ್ ಸೋಲಾರ್ (Alpex Solar) ಕಂಪನಿಯ ಷೇರುಗಳು ಪಟ್ಟಿ ಮಾಡಿದ ನಂತರ ನಿರಂತರವಾಗಿ ಭಾರಿ ಏರಿಕೆ ಕಾಣುತ್ತಿವೆ.
ಮಂಗಳವಾರ, ಫೆ. 20ರಂದು ಕೂಡ ಆಲ್ಪೆಕ್ಸ್ ಸೋಲಾರ್ ಷೇರುಗಳ ಬೆಲೆ 5% ವರೆಗೆ ಏರಿ, 52 ವಾರಗಳ ಗರಿಷ್ಠ ಬೆಲೆ 398.45 ರೂಪಾಯಿ ತಲುಪಿತು. ಷೇರು ಮಾರುಕಟ್ಟೆಯಲ್ಲಿ ಪಟ್ಟಿ ಮಾಡಿದ ನಾಲ್ಕು ವಹಿವಾಟು ದಿನಗಳಲ್ಲಿಯೇ ಈ ಷೇರುಗಳ ಬೆಲೆ 246.5% ಏರಿಕೆ ಕಂಡಿರುವುದರಿಂದ ಹೂಡಿಕೆದಾರರಿಗೆ ಬಂಪರ್ ಲಾಭ ದೊರೆತಿದೆ.
ಐಪಿಒದಲ್ಲಿ ಷೇರುಗಳನ್ನು ಹಂಚಿಕೆ ಮಾಡಿದ ನಂತರ ಷೇರು ಮಾಕಟ್ಟೆಯಲ್ಲಿ ಫೆಬ್ರವರಿ 15 ರಂದು ಪಟ್ಟಿ ಮಾಡಲಾಗಿತ್ತು.
ಅಂದು ಕಂಪನಿಯ ಷೇರುಗಳು 329 ರೂ. ಬೆಲೆಯಲ್ಲಿ ಪಟ್ಟಿ ಮಾಡಲ್ಪಟ್ಟವು. ಐಪಿಒದಲ್ಲಿ ಈ ಷೇರುಗಳನ್ನು 115 ರೂಪಾಯಿಗೆ ನೀಡಲಾಗಿತ್ತು. ಇಶ್ಯೂ ಬೆಲೆಗಿಂತ 186.09% ಹೆಚ್ಚಿನ ಬೆಲೆ ಈ ಷೇರುಗಳು ಪಟ್ಟಿ ಮಾಡಿದ್ದವು.
ಆಲ್ಪೆಕ್ಸ್ ಸೋಲಾರ್ ಗ್ರೇಟರ್ ನೋಯ್ಡಾ ಮೂಲದ ಕಂಪನಿಯಾಗಿದೆ. ಇದು ದ್ಯುತಿವಿದ್ಯುಜ್ಜನಕ ಮಾಡ್ಯೂಲ್‌ಗಳನ್ನು ಉತ್ಪಾದಿಸಲು ಮೊನೊಕ್ರಿಸ್ಟಲಿನ್ ಮತ್ತು ಪಾಲಿಕ್ರಿಸ್ಟಲಿನ್ ಸೆಲ್ ತಂತ್ರಜ್ಞಾನವನ್ನು ಬಳಸುತ್ತದೆ.
ಇದರ ಉತ್ಪನ್ನ ಶ್ರೇಣಿಯು ಹಾಫ್‌ಕಟ್, ಮೊನೊ-ಪರ್ಕ್ ಮತ್ತು ಬೈಫೇಶಿಯಲ್ ಸೋಲಾರ್ ಪಿವಿ ಮಾಡ್ಯೂಲ್‌ಗಳನ್ನು ಒಳಗೊಂಡಿದೆ. ಮೇಲ್ಮೈ ಮತ್ತು ಸಬ್‌ಮರ್ಸಿಬಲ್ ಶ್ರೇಣಿಯ AC/DC ಸೋಲಾರ್ ಪಂಪ್‌ಗಳ ಇಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ ರೀತಿಯ ಪರಿಹಾರಗಳನ್ನು ಒದಗಿಸುತ್ತದೆ.
ಆಲ್ಪೆಕ್ಸ್ ಸೋಲಾರ್ 2023-24ನೇ ಹಣಕಾಸು ವರ್ಷದಲ್ಲಿ 183.93 ಕೋಟಿ ರೂ. ಆದಾಯವನ್ನು ವರದಿ ಮಾಡಿದೆ, 2022-23ನೇ ಹಣಕಾಸು ವರ್ಷದಲ್ಲಿ 156.06 ಕೋಟಿ ರೂ. ಆದಾಯ ಇತ್ತು. ಸೆಪ್ಟೆಂಬರ್ 2023ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ 10.02 ಕೋಟಿ ರೂಪಾಯಿ ಲಾಭ ಮಾಡಿದೆ.