

ಬೆಂಗಳೂರು: ಪರಿಶಿಷ್ಟರಿಗೆ ಮಂಜೂರಾಗಿದ್ದ ಸರ್ಕಾರಿ ಜಮೀನನ್ನು ನಿಯಮಬಾಹಿರವಾಗಿ ಕಬಳಿಕೆ ಮಾಡಲು ಕೆಲ ಪ್ರಭಾವಿ ವ್ಯಕ್ತ್ತಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸಾಥ್ ನೀಡಿರುವುದರಿಂದ 1,600 ಕೋಟಿ ರೂ. ಮೌಲ್ಯದ ಸರ್ಕಾರದ ಸ್ವತ್ತು ಅನ್ಯರ ಪಾಲಾಗಿದೆ. ಈ ಪ್ರಕಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೆಂಗೇರಿ ಗ್ರಾಮದ ಸರ್ವೆ ನಂ.69ಕ್ಕೆ ಸೇರಿದ 37 ಎಕರೆ 20 ಗುಂಟೆ ಬಂಡೆ ಜಮೀನನ್ನು ಸರ್ಕಾರವು 1973ರಲ್ಲಿ 25 ಮಂದಿ ಜಮೀನುರಹಿತ ಪರಿಶಿಷ್ಟರಿಗೆ ಮಂಜೂರು ಮಾಡಿತ್ತು. ಮಂಜೂರಾತಿ ಪಡೆದವರಲ್ಲಿ ಬಹುತೇಕ ಮಂದಿ ಈಗ ಮೃತಪಟ್ಟಿದ್ದಾರೆ. ಇದನ್ನು ಲಾಭ ಮಾಡಿಕೊಳ್ಳಲು ಪ್ರಭಾವಿಗಳು ಹಾಗೂ ಅಧಿಕಾರಿಗಳು ಅಷ್ಟೂ ಜಮೀನನ್ನು ಖರೀದಿಸಿ ಕೋಟ್ಯಂತರ ರೂ. ಮೌಲ್ಯದ ಜಮೀನನ್ನು ರಾತ್ರೋ ರಾತ್ರಿ ಕಬ್ಜ ಮಾಡಿಕೊಂಡಿದ್ದಾರೆ. ಪರಿಶಿಷ್ಟರಿಗೆ ಮಂಜೂರಾದ ಜಮೀನು ಮಾರಾಟಕ್ಕೆ ಸರ್ಕಾರದ ಅನುಮತಿ ಕಡ್ಡಾಯ. ಈ ನಿಯಮ ಪಾಲಿಸದೆ ಮಾರಾಟ ಮಾಡಿದರೆ ತನ್ನಿಂದತಾನೆ ಗ್ರ್ಯಾಂಟ್ ರದ್ದಾಗಿದೆ. ಆದರೂ, ಪಟ್ಟಭದ್ರರು ಕಂದಾಯ ಇಲಾಖೆಯ ಸರ್ವೆಯರ್‌ಗಳು, ಎಡಿಎಲ್‌ಆರ್, ಡಿಡಿಎಲ್‌ಆರ್ ಪೋಡಿ ಮಾಡಿಕೊಟ್ಟಿದ್ದಾರೆ. ಇದಕ್ಕೆ ಬೆಂಗಳೂರು ದಕ್ಷಿಣ ತಹಸೀಲ್ದಾರ್‌ಗಳು, ಉಪವಿಭಾಗಾಧಿಕಾರಿ ಅನುಮೋದಿಸಿದ್ದಾರೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಆರೋಪಿಸಿದರು.
15 ದಿನಗಳಲ್ಲಿ ಪೋಡಿ ಭಾಗ್ಯ:
ರೈತರಿಗೆ ಸೇರಿದ ಜಮೀನನ್ನು ಪೋಡಿ ಮಾಡಲು ವರ್ಷಗಳೇ ಹಿಡಿಯುತ್ತಿದೆ. ಹೀಗಿರುವಾಗ ಸದರಿ ಪ್ರಕರಣದಲ್ಲಿ ಡೆವಲಪರ್ಸ್ ಹೆಸರಿಗೆ 15 ದಿನಗಳಲ್ಲೇ ಪೋಡಿ ಮಾಡಿಕೊಟ್ಟಿರುವ ಅಧಿಕಾರಿಗಳು ಅವ್ಯವಹಾರಕ್ಕೆ ನೆರವು ನೀಡಿದ್ದಾರೆ. ಸರ್ಕಾರದ ಒಪ್ಪಿಗೆ ಪತ್ರ ಇಲ್ಲದೆ ಕಡತಕ್ಕೆ ಸಹಿ ಹಾಕಿರುವುದರಿಂದ ಗ್ರ್ಯಾಂಟ್ ಜಮೀನು ಪರಿಶಿಷ್ಟ ಕುಟುಂಬಗಳ ಕೈತಪ್ಪಿದೆ. ಸದರಿ ಜಮೀನಿನ ಪ್ರತಿ ಚದರ ಅಡಿಗೆ 10 ಸಾವಿರ ರೂ. ಮಾರುಕಟ್ಟೆ ದರ ಇದೆ. ಹೀಗಾಗಿ ಬೆಲೆಬಾಳುವ ಜಮೀನನ್ನು ಕಬಳಿಸಲು ರಾಮನಗರ ಜಿಲ್ಲೆಗೆ ಸೇರಿದ ಆಡಳಿತ ಪಕ್ಷದ ಶಾಸಕರೊಬ್ಬರು ತಮ್ಮ ಪ್ರಭಾವ ಬಳಸಿ ಅಧಿಕಾರಿಗಳ ಮೂಲಕ ಕಾನೂನುಬಾಹಿರ ಕೆಲಸ ಮಾಡಿಸಿದ್ದಾರೆ. ಜತೆಗೆ ಆ ಜಮೀನನ್ನು ಖಾಸಗಿ ಡೆವೆಲಪರ್ಸ್ ಖರೀದಿಸಲು ಸಹಕರಿಸಿದ್ದಾರೆ ಅವರು ಎಂದು ದೂರಿದರು.
ಮಾರಾಟ ಒಪ್ಪಿಗೆ ಹಿಂಪಡೆಯಲು ಆಗ್ರಹ:
ಇಪ್ಪತ್ತೈದು ಪರಿಶಿಷ್ಟರಿಗೆ ಮಂಜೂರಾಗಿದ್ದ ಸರ್ಕಾರಿ ಜಮೀನಿನ ಪೈಕಿ 9ಕ್ಕೆ ಮಾರಾಟ ಮಾಡುವ ಪತ್ರವನ್ನು ಕಾನೂನುಬಾಹಿರವಾಗಿ ನೀಡಲಾಗಿದೆ. ಉಳಿದ ಪ್ರಕರಣಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುವ ಹಂತದಲ್ಲಿ ಹೀಗಾಗಿ ಈ ಪ್ರಕರಣದಲ್ಲಿ ಈಗಾಗಲೇ ನೀಡಿರುವ ಒಪ್ಪಿಗೆಯನ್ನು ರದ್ದುಪಡಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ಜತೆಗೆ ಪ್ರಕರಣದ ಗಂಭೀರತೆ ಅರಿತು ಸಿಐಡಿ ತನಿಖೆಗೆ ವಹಿಸುವ ನಿರ್ಧಾರವನ್ನು ಕೈಗೊಳ್ಳಲು ಕಂದಾಯ ಸಚಿವರು ಮುಂದಾಗಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದ್ದಾರೆ.