ಮುಂಬೈ, ಎಂಪಿಗೆ ಮುನ್ನಡೆ: ತಮಿಳುನಾಡು ಎದುರು ಶಾರ್ದೂಲ್ ಶತಕದಾಟ

New-Project-2-2
Published on

ಮುಂಬೈ/ನಾಗ್ಪುರ: ಆಲ್ರೌಂಡರ್ ಶಾರ್ದೂಲ್ ಠಾಕೂರ್ (109 ರನ್, 104 ಎಸೆತ, 13 ಬೌಂಡರಿ, 4 ಸಿಕ್ಸರ್) ಚೊಚ್ಚಲ ಶತಕದ ನೆರವಿನಿಂದ ಆತಿಥೇಯ ಮುಂಬೈ ತಂಡ ಪ್ರತಿಷ್ಠಿತ ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯ ಸೆಮಿೈನಲ್‌ನಲ್ಲಿ ಪ್ರವಾಸಿ ತಮಿಳುನಾಡು ಎದುರು ಇನಿಂಗ್ಸ್ ಮುನ್ನಡೆಯೊಂದಿಗೆ ಬಿಗಿಹಿಡಿತ ಸಾಧಿಸಿದೆ.

ಬಿಕೆಸಿ ಗ್ರೌಂಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಭಾನುವಾರ 2 ವಿಕೆಟ್‌ಗೆ 45 ರನ್‌ಗಳಿಂದ 2ನೇ ದಿನದಾಟ ಆರಂಭಿಸಿದ ಮುಂಬೈ, ಎಡಗೈ ಸ್ಪಿನ್ನರ್ ಸಾಯಿ ಕಿಶೋರ್ (97ಕ್ಕೆ 6) ದಾಳಿಗೆ ಸಿಲುಕಿ 106 ರನ್‌ಗಳಿಗೆ 7 ವಿಕೆಟ್ ಕಳೆದುಕೊಂಡು ಇನಿಂಗ್ಸ್ ಹಿನ್ನಡೆ ಭೀತಿ ಎದುರಿಸಿತು. ಆಗ ಜತೆಯಾದ ಶಾರ್ದೂಲ್ ಹಾಗೂ ಹಾರ್ದಿಕ್ ತಾಮೋರೆ (35) ಜೋಡಿ 8ನೇ ವಿಕೆಟ್‌ಗೆ 105 ರನ್‌ಗಳ ಜತೆಯಾಟದ ಮೂಲಕ ಚೇತರಿಕೆ ನೀಡಿತು. ದಿನದಂತ್ಯಕ್ಕೆ 9 ವಿಕೆಟ್‌ಗೆ 353 ರನ್‌ಗಳಿಸಿರುವ ಅಜಿಂಕ್ಯ ರಹಾನೆ ಪಡೆ 207 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿದೆ. ತನುಷ್ ಕೋಟ್ಯಾನ್ (74*) ಜತೆಯಾಗಿ ತುಷಾರ್ ದೇಶಪಾಂಡೆ (17*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಬಿಸಿಸಿಐ ವಾರ್ಷಿಕ ಗುತ್ತಿಗೆ ಪಟ್ಟಿಯಿಂದ ಹೊರಬಿದ್ದ ಬಳಿಕ ಕಣಕ್ಕಿಳಿದಿರುವ ಶ್ರೇಯಸ್ ಅಯ್ಯರ್ (3) ನಿರಾಸೆ ಅನುಭವಿಸಿದರೆ, ನಾಯಕ ಅಜಿಂಕ್ಯ ರಹಾನೆ (19) ಕೂಡ ರನ್‌ಬರ ಮುಂದುವರಿಸಿದರು.

ತಮಿಳುನಾಡು: 146. ಮುಂಬೈ: 9 ವಿಕೆಟ್‌ಗೆ 353 (ಮುಶೀರ್ ಖಾನ್ 55, ರಹಾನೆ 19, ಹಾರ್ದಿಕ್ 35 ಶಾರ್ದೂಲ್ 109, ತನುಷ್ 74*, ಸಾಯಿ ಕಿಶೋರ್ 97ಕ್ಕೆ 6).

ಮಧ್ಯಪ್ರದೇಶಕ್ಕೆ ಹಿಮಾಂಶು ಶತಕದಾಸರೆ: ಆರಂಭಿಕ ಹಿಮಾಂಶು ಮಂತ್ರಿ (126 ರನ್, 265 ಎಸೆತ, 13 ಬೌಂಡರಿ, 1 ಸಿಕ್ಸರ್) ಸಮಯೋಚಿತ ಶತಕದ ನೆರವಿನಿಂದ ಪ್ರವಾಸಿ ಮಧ್ಯಪ್ರದೇಶ ಇನ್ನೊಂದು ಸೆಮಿೈನಲ್‌ನಲ್ಲಿ ವಿದರ್ಭ ಎದುರು ಅಮೂಲ್ಯ ಮುನ್ನಡೆ ಸಾಧಿಸಿದೆ. ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ 1 ವಿಕೆಟ್‌ಗೆ 47 ರನ್‌ಗಳಿಂದ ದಿನದಾಟ ಆರಂಭಿಸಿದ ಮಧ್ಯಪ್ರದೇಶ, 94.3 ಓವರ್‌ಗಳಲ್ಲಿ 252 ರನ್‌ಗಳಿಗೆ ಆಲೌಟ್ ಆಗಿ 82 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿತು.  ಎರಡನೇ ಸರದಿ ಆರಂಭಿಸಿದ ವಿದರ್ಭ ದಿನದಂತ್ಯಕ್ಕೆ 4 ಓವರ್‌ಗಳಲ್ಲಿ 1 ವಿಕೆಟ್‌ಗೆ 13 ರನ್‌ಗಳಿಸಿದ್ದು, ಇನ್ನೂ 69 ರನ್ ಹಿನ್ನಡೆಯಲ್ಲಿದೆ. ಧ್ರುವ ಶೋರೆ (10*) ಹಾಗೂ ಅಕ್ಷಯ್ ವಾಖರೆ (1*) 3ನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ವಿದರ್ಭ: 170 ಹಾಗೂ 1 ವಿಕೆಟ್‌ಗೆ 13 (ಅಥರ್ವ 2, ಧ್ರುವ 10*, ಆವೇಶ್ ಖಾನ್ 2ಕ್ಕೆ 21). ಮಧ್ಯಪ್ರದೇಶ: 94.3 ಓವರ್‌ಗಳಲ್ಲಿ 252 (ಹಿಮಾಂಶು 126, ಸಾಗರ್ 26, ಸರಶ್ಯ ಜೈನ್ 30, ಉಮೇಶ್ ಯಾದವ್ 40ಕ್ಕೆ 3, ಯಶ್ ಠಾಕೂರ್ 51ಕ್ಕೆ3, ಅಕ್ಷಯ್ 68ಕ್ಕೆ 2).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net