ಸಾಮೂಹಿಕ ಧರ್ಮ ಆಚರಣೆಯಿಂದ ಅನುಗ್ರಹ : ಎಂ.ಸುಬ್ರಹ್ಮಣ್ಯ ಭಟ್ ಅಭಿಮತ

sharada
Published on

ಬಂಟ್ವಾಳ: ಕಲಿಯುಗದಲ್ಲಿ ಸಾಮೂಹಿಕ ಧರ್ಮ ಆಚರಣೆ ಮಾಡುವುದರಿಂದ ದೇವತಾ ಅನುಗ್ರಹ ಪ್ರಾಪ್ತಿಯಾಗುವುದೆಂದು ಹೇಳಲಾಗಿದೆ. ಸನಾತನ ಧರ್ಮದಲ್ಲಿ ಶರನ್ನವರಾತ್ರಿ ಶಾರದಾ ಪೂಜೆಗೆ ವಿಶೇಷ ಮಹತ್ವವಿದ್ದು ಶಾರದಾ ಪೂಜಾಸಮಿತಿ ಆಶಯದಂತೆ ಶತಮಾನೋತ್ಸವ ವರ್ಷಪೂರ್ತಿ ಧಾರ್ಮಿಕ ಸಾಂಸ್ಕೃತಿಕ ಶೈಕ್ಷಣಿಕ ಸಾಮಾಜಿಕ ಕಾರ್ಯಕ್ರಮಗಳು ದೇವರ ದಯದಿಂದ ನಡೆಯುವಂತಾಗಲಿ ಎಂದು ಸಜೀಪ ಮಾಗಣೆ ತಂತ್ರಿ ಎಂ.ಸುಬ್ರಹ್ಮಣ್ಯ ಭಟ್ ಶುಭ ಹಾರೈಸಿದರು.

ಸುಭಾಷ್ ಯುವಕ ಮಂಡಲ ಹಾಗೂ ಶ್ರೀ ಶಾರದಾ ಪೂಜಾ ಸೇವಾ ಸಮಿತಿ ಸುಭಾಷ್‌ನಗರ ಸಜಿಪಮೂಡ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಭಾಷ್ ನಗರ ವಠಾರದಲ್ಲಿ ನಡೆದ 98ನೇ ವರ್ಷದ ಶ್ರೀ ಶಾರದಾ ಪೂಜಾ ಮಹೋತ್ಸವದ ಪ್ರಥಮ ದಿನದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಾಲಾ ಮುಖ್ಯಶಿಕ್ಷಕಿ ವತ್ಸಲ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್.ಶ್ರೀಕಾಂತ್ ಶೆಟ್ಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದೇವಿ ಪ್ರಸಾದ್ ಪೂಂಜಾ, ಗ್ರಾಮ ಪಂಚಾಯಿತಿ ಸದಸ್ಯರಾದ ಎಸ್.ಶ್ರೀನಾಥ್ ಶೆಟ್ಟಿ, ಯೋಗೀಶ್ ಬೆಳ್ಚಾಡ, ಶಾರದಾ ಪೂಜಾ ಸಮಿತಿ ಅಧ್ಯಕ್ಷ ಕಿಶೋರ್, ಮಹಿಳಾ ಸಮಿತಿ ಅಧ್ಯಕ್ಷ ಪುಷ್ಪ ರಮೇಶ್ ಉಪಸ್ಥಿತರಿದ್ದರು. ಗಿರೀಶ್ ಕುಮಾರ್ ಪೆರ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net