ಮುದ್ದೇಬಿಹಾಳ: ಪಟ್ಟಣದ ಪಿಲೇಕೆಮ್ಮನಗರದ ಅಂಗನವಾಡಿ ಕೇಂದ್ರ ನಂ.1ರ ಕಾರ್ಯಕರ್ತೆ ಶಾಂತಾ ಮಾಮನಿ ಅವರಿಗೆ ಅನ್ಯಾಯವಾಗಿದ್ದು ಅವರಿಗೆ ನ್ಯಾಯ ಕೊಡಿಸಬೇಕು, ಮೇಲ್ವಿಚಾರಕಿ ಶಾರದಾ ಗುಮಶೆಟ್ಟಿ, ಸಿಡಿಪಿಒ ಶಿವಮೂರ್ತಿ ಕುಂಬಾರ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸೇವಾ ಸಂಘದಿಂದ ಸೋಮವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲಾಯಿತು.
ಅಂಗನವಾಡಿ ಕೆಲಸದ ಅವಧಿ ಮುಗಿದ ನಂತರ ಮಧ್ಯಾಹ್ನ ಧರಣಿ ಪ್ರಾರಂಭಿಸಿದ ಸ್ಥಳಕ್ಕೆ ಸಂಜೆ ಆಗಮಿಸಿದ ಸಂಘದ ರಾಜ್ಯಾಧ್ಯಕ್ಷೆ ನೀಲಮ್ಮ ಬೋರಾವತ್ ಅವರು ಗ್ರೇಡ್-2 ತಹಸೀಲ್ದಾರ್ ಎಸ್.ಎಚ್.ಮೆಳ್ಳಿಗೇರಿ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಿ ಮಾತನಾಡಿದರು.
ತಾಳಿಕೋಟೆಯಲ್ಲಿ ಅಂಗನವಾಡಿ ಕೆಲಸ ಮುಗಿಸಿಕೊಂಡು ನನ್ನ ಸ್ವಂತ ವಾಹನದಲ್ಲಿ ಬರುವಾಗ ಕುಂಟೋಜಿ ಹತ್ತಿರದ ಚರ್ಚ್ ಬಳಿ ಬೈಕ್ ಮೇಲೆ ಬಂದ ನಾಲ್ವರು ನನಗೆ ಅಡ್ಡಹಾಕಿ ಬೆದರಿಕೆ ಒಡ್ಡಿದರು. ಅವರಿಂದ ಪಾರಾಗಿ ಬರಲು ತಡವಾಯಿತು ಎಂದು ಧರಣಿ ಸ್ಥಳಕ್ಕೆ ತಡವಾಗಿ ಬಂದ ಕಾರಣ ಬಿಡಿಸಿಟ್ಟ ನೀಲಮ್ಮ ಅವರು ಕಾರ್ಯಕರ್ತೆಯರ ಪರ ಹೊರಾಡುತ್ತಿರುವ ನಮಗೆ ಜೀವ ಬೆದರಿಕೆ ಇದೆ ಎಂದು ಅಳಲು ತೋಡಿಕೊಂಡರು.
ಶಾಂತಾಳನ್ನು ವರ್ಗಾಯಿಸಿ ಆ ಜಾಗಕ್ಕೆ ರೇಣುಕಾಳನ್ನು ನೇಮಿಸಲು ಶಾಸಕ ಸಿ.ಎಸ್.ನಾಡಗೌಡರೇ ಜಿಲ್ಲಾಧಿಕಾರಿಗೆ ಪತ್ರ ಕೊಟ್ಟಿದ್ದಾರಲ್ಲ ? ಎನ್ನುವ ಪತ್ರಕರ್ತರ ಪ್ರಶ್ನೆಗೆ ಸ್ಪಷ್ಟನೆ ನೀಡಿದ ಅವರು, ಶಾಸಕರು ಈ ಆ ಪತ್ರ ಕೊಟ್ಟಿಲ್ಲ ಅನ್ನೋ ವಿಶ್ವಾಸ ಅವರ ಅಭಿಮಾನಿಗಳಾಗಿರುವ ನಮಗೆ ಇದೆ. ಅವರ ಹೆಸರಿನಲ್ಲಿ ಬೇರೆ ಯಾರೋ ಪತ್ರ ಕೊಟ್ಟು ಅಧಿಕಾರಿಗಳ ದಾರಿ ತಪ್ಪಿಸಿದ್ದಾರೆ. ಶಾಸಕರು ಉಪಚುನಾವಣಾ ಪ್ರಚಾರದಲ್ಲಿದ್ದು ಕ್ಷೇತ್ರಕ್ಕೆ ಬಂದ ಕೂಡಲೇ ಅವರನ್ನು ಭೇಟಿ ಮಾಡಿ ಪತ್ರದ ಬಗ್ಗೆ ಸ್ಪಷ್ಟನೆ ಕೇಳುತ್ತೇವೆ. ಇದೆ ವಿಷಯವಾಗಿ ಹೊದೊಮ್ಮೆ ಅವರನ್ನು ನಾವು ಭೇಟಿ ಮಾಡಿದ್ದಾಗ ಶಾಂತಾ ಅದೇ ಕೇಂದ್ರದಲ್ಲಿರಲಿ ಎಂದು ಹೇಳಿದ್ದ ಶಾಸಕರು ಪತ್ರ ಕೊಡುವುದು ಹೇಗೆ ಸಾಧ್ಯ ಎಂದರು.
ಪದಾಧಿಕಾರಿಗಳಾದ ಶೋಭಾ ಘಾಟಗೆ, ಶಾಂತಾ ಮಾಮನಿ, ನೀಲಮ್ಮ ತೊಂಡಿಹಾಳ, ಸದಸ್ಯರಾದ ವಿದ್ಯಾ ಮುರಾಳ, ಮಂಜುಳಾ ಜಾಧವ, ಗುರುಬಾಯಿ ಲಮಾಣಿ, ನಿರ್ಮಲಾ ನಾಶಿ, ಶಮಶಾದ ಹುಣಶ್ಯಾಳ, ಜೈಬುನ್ನೀಸಾ ದಿಡ್ಡಿ, ರಾಜೇಶ್ವರಿ ಮಮದಾಪುರ, ಮಂಗಲಾ ಪುರಾಣಿಕಮಠ ಇತರರಿದ್ದರು.