

ಇಸ್ಲಾಮಾಬಾದ್: ಬಾಂಗ್ಲಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಪಾಕಿಸ್ತಾನ ಸೋತಿದ್ದು, ವೇಗಿ ಶಾಹೀನ್ ಶಾ ಅಫ್ರಿದಿ ವಿಫಲವಾಗಿದ್ದಕ್ಕೆ ಆತನನ್ನು ಎರಡನೇ ಪಂದ್ಯದಿಂದ ದೂರವಿಟ್ಟಿದ್ದಕ್ಕೆ ಪಾಕ್ ಕ್ರಿಕೆಟ್ ಮಂಡಳಿ ವಿರುದ್ಧ ಹಿರಿಯ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಅಸಮಾಧಾನ ಹೊರಹಾಕಿದ್ದಾರೆ.
ನಿಯಮಗಳು ಎಲ್ಲ ಆಟಗಾರರಿಗೂ ಸಮಾನವಾಗಿ ಅನ್ವಯಿಸಬೇಕು. ಆದರೆ ನಾಯಕ ಬಾಬರ್ ಆಜಮ್ ಬಗ್ಗೆ ಏಕೆ ಕ್ರಮವಿಲ್ಲ? ಬಾಬರ್ ಇತ್ತೀಚಿನ 14 ಇನ್ನಿಂಗ್ಸ್‌ಗಳಲ್ಲಿ ಹೇಗೆ ಪ್ರದರ್ಶನ ನೀಡಿದ್ದಾನೆ ಎಂಬುದನ್ನು ಗಮನಿಸಿದ್ದೀರಾ ಎಂದು ಶೆಹಜಾದ್ ಪ್ರಶ್ನಿಸಿದ್ದಾರೆ.
ಜಿಂಬಾಬ್ವೆ ಎದುರು ಸೋತಿದ್ದೀರಿ, ನಂತರ ಐರ್ಲೆಂಡ್, ಅಮೇರಿಕಾ, ಭಾರತ ವಿರುದ್ಧ ಸೋತಿದ್ದೀರಿ. ಈಗ ಬಾಂಗ್ಲಾದೇಶದ ವಿರುದ್ಧ ಸೋಲು ಉಂಡಿದ್ದೀರಿ. ಇದಕ್ಕೆಲ್ಲ ಶಾಹೀನ್ ಒಬ್ಬನೇ ಕಾರಣಾನಾ? ಇದಕ್ಕೆ ಟೀಮ್‌ನಲ್ಲಿರುವ ಎಲ್ಲರೂ ಉತ್ತರಿಸಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಒಬ್ಬ ಶಾಹೀನ್ ನನ್ನು ತಪ್ಪಿಸಿದರೆ ಪಾಕಿಸ್ತಾನ ಕ್ರಿಕೆಟ್ ಸರಿಯಾದ ಹಾದಿಯಲ್ಲಿ ಸಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಳಪೆ ಪ್ರದರ್ಶನದಿಂದ ತಂಡದ ಸೋಲಿಗೆ ಕಾರಣರಾದ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅವರೂ ಜವಾಬ್ದಾರಿಯಿಂದ ವರ್ತಿಸಬೇಕು. ದೇಶ ಮತ್ತು ಕ್ರಿಕೆಟ್‌ಗಿಂತ ಇಲ್ಲಿ ಯಾರೂ ದೊಡ್ಡವರಲ್ಲ. ದೇಶ ಮೊದಲನೆಯದು. ಅದರ ನಂತರ ಉಳಿದಿದ್ದು. ಪಾಕಿಸ್ತಾನ ಕ್ರಿಕೆಟ್ ಉತ್ತಮ ದಿಕ್ಕಿನಲ್ಲಿ ಸಾಗಬೇಕಾದರೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಶೆಹಜಾದ್ ಹೇಳಿದ್ದಾರೆ.