

ಸೂರತ್: ಗುಜರಾತಿ ಭಾಷೆಯಲ್ಲಿ ಮೂಡಿ ಬಂದಿರುವ ‘ಚೆಲ್ಲೋ ಷೋ’ ('Chhello Show' ) ಸಿನಿಮಾ 2023ರ ಆಸ್ಕರ್ ಪ್ರಶಸ್ತಿಗಾಗಿ ಭಾರತದಿಂದ ಅಧಿಕೃತವಾಗಿ ಸ್ಪರ್ಧಿಸುತ್ತಿದೆ. ಈಗಾಗಲೇ ಮೂವತ್ತು ಹೆಚ್ಚು ದೇಶಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಭಾರತದಲ್ಲಿ ಇನ್ನೂ ಬಿಡುಗಡೆ ಆಗಬೇಕಿದೆ.
95ನೇ ಅಕಾಡೆಮಿ ಪ್ರಶಸ್ತಿಯಲ್ಲಿ ಉತ್ತಮ ಅಂತಾರಾಷ್ಟ್ರೀಯ ಫೀಚರ್ ಸಿನಿಮಾ ಎಂದು ಆಯ್ಕೆಯಾಗಿದೆ. ಆರ್ ಆರ್ ಆರ್, ದಿ ಕಾಶ್ಮೀರ್ ಫೈಲ್ಸ್, ಬ್ರಹ್ಮಾಸ್ತ್ರದಂಥ ಘಟಾನುಘಟಿ ಸಿನಿಮಾಗಳನ್ನು ತಳ್ಳಿ 'ಛೆಲ್ಲೋ ಷೋ' ಆಸ್ಕರ್ ಕಣಕ್ಕೆ ಇಳಿದಿದೆ. ಭಾರತದಲ್ಲಿ ಇನ್ನೂ ಬಿಡುಗಡೆ ಆಗುವ ಮೊದಲೇ ಆಸ್ಕರ್ ಪ್ರಶಸ್ತಿಯ ರೇಸ್ನಲ್ಲಿ ಈ ಚಿತ್ರ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ. ಇದೊಂದು ಹೆಮ್ಮೆಯ ಸಂಗತಿಯಾದರೆ, ಕನ್ನಡಿಗರ ಪಾಲಿಗೆ ಈ ಚಿತ್ರ ಇನ್ನೊಂದು ಹೆಮ್ಮೆ ಮೂಡಿಸಿದೆ.
ಅದೇನೆಂದರೆ, ಚಿತ್ರರಂಗದ ಬೆಳವಣಿಗೆ ಕುರಿತಾದ ಕಥಾ ಹಂದರವನ್ನೂ ಹೊಂದಿರುವ ಚೆಲ್ಲೋ ಷೋ ಚಿತ್ರಕ್ಕೆ ಕನ್ನಡದ ಪವನ್ ಭಟ್ ಎನ್ನುವವರು ಸಂಕಲನದ ಕೆಲಸ ಮಾಡಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಪವನ್ ಭಟ್ ಮೂಲತಃ ಉಪ್ಪಿನಂಗಡಿಯವರಾಗಿರುವ ಪವನ್ ಅವರು ಸಂಕಲಿಸಿದ ಸಿನಿಮಾಗೆ ಆಸ್ಕರ್ ಗೆ ಹೋಗುವಂತಹ ಅವಕಾಶ ಸಿಕ್ಕಿದೆ.
ಇಂಜಿನಿಯರಿಂಗ್ ಓದಿರುವ ಪವನ್, ಸಿನಿಮಾ ಎಡಿಟಿಂಗ್ನತ್ತ ಆಸಕ್ತಿ ಬೆಳೆಸಿಕೊಂಡವರು. ಇದಾಗಲೇ ಎಂಟು ವರ್ಷಗಳ ಕಾಲ ಮುಂಬೈನಲ್ಲಿ ಕೆಲಸ ಮಾಡಿದ್ದಾರೆ. 20ಕ್ಕೂ ಅಧಿಕ ಸಿನಿಮಾಗಳಿಗೆ ಎಡಿಟಿಂಗ್ ಮಾಡಿದ್ದಾರೆ. ಹಿರಿಯ ಎಡಿಟರ್ ಜತೆ ಸೇರಿಕೊಂಡು ಚೆಲ್ಲೋ ಶೋ ಸಿನಿಮಾಗಾಗಿ ಭಟ್ ಕೆಲಸ ಮಾಡಿದ್ದಾರೆ.
ಒಂಬತ್ತು ವರ್ಷದ ಹುಡುಗನೊಬ್ಬ ಡಿಜಿಟಲ್ ಕ್ರಾಂತಿಯ ಮಾಂತ್ರಿಕತೆ ಬೆನ್ನು ಬೀಳುವಂತಹ ಕಥೆಯನ್ನು ಸಿನಿಮಾ ಹೊಂದಿದೆ. ನಿರ್ದೇಶಕರ ಜೀವನದಲ್ಲಿ ನಡೆದ ಹಲವು ಘಟನೆಗಳನ್ನು ಇದರಲ್ಲಿ ಬಳಸಿಕೊಳ್ಳಲಾಗಿದೆ. ಈ ಸಿನಿಮಾ ಈಗಾಗಲೇ ವಿವಿಧ ದೇಶಗಳಲ್ಲಿ ನಡೆದ ಚಲನಚಿತ್ರೋತ್ಸವದಲ್ಲಿ ಭಾಗಿಯಾಗಿ ಹತ್ತಾರು ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದೆ ಎನ್ನುವುದು ವಿಶೇಷ. (ಏಜೆನ್ಸೀಸ್)