ಡ್ರಾಪ್ ಕೊಡುವ ನೆಪದಲ್ಲಿ ಚಾಲಕನಿಂದ ಲೈಂಗಿಕ ಕಿರುಕುಳ!

Sexual harassement
ಸಾಂದರ್ಭಿಕ ಚಿತ್ರ
Published on

ಶ್ರೀನಿವಾಸಪುರ: ಆಂಧ್ರಪ್ರದೇಶದ ವಲಸೆ ಕಾರ್ಮಿಕರಿಗೆ ಡ್ರಾಪ್ ಕೊಡುವ ನೆಪದಲ್ಲಿ ಟಾಟಾ ಏಸ್ ಚಾಲಕ ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ಚಾಲಕನನ್ನು ಆ ಮಹಿಳೆ ಮತ್ತು ಇತರ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಶ್ರೀನಿವಾಸಪುರ ತಾಲೂಕಿನ ನಾಗದೇನಹಳ್ಳಿ ಬಳಿ ಬುಧವಾರ ರಾತ್ರಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿಡಿಯೋ ಹರಿದಾಡುತ್ತಿದೆ.

ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕರು ಕುಟುಂಬ ಸಮೇತರಾಗಿ ಬೆಂಗಳೂರಿನಿಂದ ಆಂಧ್ರಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದಾಗ ಕೋಲಾರದ ಗಡಿ ತಾವರೆಕೆರೆ ಬಳಿ ರೋಣೂರು ಗ್ರಾಮದ ಟಾಟಾ ಏಸ್ ಚಾಲಕ ಗೌಸ್ ಎಂಬಾತ ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡು, ಮಹಿಳೆ ಮತ್ತು ಮಗಳನ್ನು ಮುಂದೆ ಕೂರಿಸಿಕೊಂಡು ಆ ಮಹಿಳೆಯ ಗಂಡನಿಗೆ ಹಿಂದೆ ಕೂರುವಂತೆ ಹೇಳಿದ್ದಾನೆ.

ಚಾಲನೆ ಮಾಡುತ್ತಾ ಮಹಿಳೆಯ ಮೈ-ಕೈ ಮುಟ್ಟಿದ್ದಾನೆ. ಇದನ್ನು ಮಹಿಳೆ ಸಹಿಸಿಕೊಳ್ಳದೆ, ಗಾಡಿ ನಿಲ್ಲಿಸುವಂತೆ ಸೂಚಿಸಿದ್ದಾಳೆ. ಆದರೂ ಆತ ನಿಲ್ಲಿಸಿಲ್ಲ. ತಾಲೂಕಿನ ಪುಂಗನೂರು ರಸ್ತೆಯ ನಾಗದೇನಹಳ್ಳಿ ಅರಣ್ಯ ಪ್ರದೇಶದ ಬಳಿ ವಾಹನ ನಿಲ್ಲಿಸಿ ಪರಿಚಯಸ್ಥರಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ಸೂಚನೆ ನೀಡಿದ್ದಾನೆ.

ಇದನ್ನರಿತ ಕೂಲಿ ಕಾರ್ಮಿಕರು ರಸ್ತೆಯಲ್ಲಿ ಬರುವ ವಾಹನ ನಿಲ್ಲಿಸಿ ವಿಷಯ ತಿಳಿಸಿದ್ದಾರೆ. ಆಗ ಅಲ್ಲಿ ಜಮಾಯಿಸಿದ ಸಾರ್ವಜನಿಕರು ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ನಂತರ ಆ ಚಾಲಕ ಓಡಿ ಹೋಗಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net