

ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂದಾಪುರ-ಬೈಂದೂರು ಹೆದ್ದಾರಿಯ ತ್ರಾಸಿ ಜಂಕ್ಷನ್ ಬಳಿಯಿಂದ ಕಿರು ಅಂಡರ್‌ಪಾಸ್‌ವರೆಗೆ ಇನ್ನೂ ಸಮರ್ಪಕ ಚರಂಡಿ ವ್ಯವಸ್ಥೆ ನಿರ್ಮಾಣವಾಗಿಲ್ಲ. ಒಂದೆಡೆ ಮೋರಿ ಹಾಕಲಾಗಿದೆ. ಅದರ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಮಾಡಿಲ್ಲ.
ಮಳೆಗಾಲದಲ್ಲಿ ಈ ಮೋರಿಯಿಂದ ಬರುವ ಭಾರೀ ಪ್ರಮಾಣದ ನೀರು ಇಲ್ಲಿರುವ ಮನೆ, ಹೋಟೆಲ್, ಅಪಾರ್ಟ್‌ಮೆಂಟ್‌ಗಳಿರುವ ಕಟ್ಟಡಗಳ ಅಂಗಳಕ್ಕೆ ನುಗ್ಗುತ್ತಿದ್ದ ಆಸ್ತಿಪಾಸ್ತಿಗಳಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ಹೆದ್ದಾರಿ ಕಾಮಗಾರಿ ನಿರ್ವಹಿಸುವವರಿಗೆ ಸ್ಥಳೀಯರು ಅನೇಕ ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಇಲ್ಲಿನ ಜನರು ಅಳಲು ತೋಡಿಕೊಳ್ಳುತ್ತಾರೆ.
ತ್ರಾಸಿ ಜಂಕ್ಷನ್ ಬಳಿಯಿಂದ ಅಂಡರ್‌ಪಾಸ್‌ವರೆಗೆ, ತ್ರಾಸಿ ಜಂಕ್ಷನ್‌ನಿಂದ ತ್ರಾಸಿ ಕಡಲ ತೀರದ ಪಾರ್ಕ್ ತನಕ ಎರಡೂ ಬದಿಯಲ್ಲಿ ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಬೈಂದೂರು ಭಾಗದಿಂದ ಬರುವಾಗ ಹೆದ್ದಾರಿಯ ಇಕ್ಕೆಲಗಳಲ್ಲಿ ನೆಲೆಸಿರುವ ಹತ್ತಾರು ಮನೆಗಳಿಗೆ, ಅಂಗಡಿ, ಹೋಟೆಲ್ ಉದ್ಯಮ ನಡೆಸುತ್ತಿರುವವರಿಗೆ ಪ್ರತಿ ವರ್ಷ ಮಳೆ ನೀರು ನುಗ್ಗಿ ನರಕ ಯಾತನೆ ಅನುಭವಿಸುವಂತಾಗಿದೆ. ತ್ರಾಸಿ ಜಂಕ್ಷನ್‌ನಿಂದ ಪೊಲೀಸ್ ನಿಲ್ದಾಣದ ಎದುರಿಗಿರುವ ಅಂಡರ್‌ಪಾಸ್‌ವರೆಗೆ, ತ್ರಾಸಿ ಜಂಕ್ಷನ್‌ನಿಂದ ತ್ರಾಸಿ ಕಡಲ ತೀರದ ಪಾರ್ಕ್ ತನಕ ಎರಡೂ ಕಡೆಯಿಂದ ಸರ್ವಿಸ್ ರಸ್ತೆ ನಿರ್ಮಿಸಿ ಕೊಡಬೇಕಿದೆ. ಆದರೆ ಇಲ್ಲಿ ಅಂಡರ್‌ಪಾಸ್ ಬಳಿಯಿಂದ ಅಣ್ಣಪ್ಪಯ್ಯ ಸಭಾಭವನದವರೆಗೆ ಸರ್ವಿಸ್ ರಸ್ತೆ ಆಗಿದೆ. ಅಲ್ಲಿಂದ ಮುಂದಕ್ಕೆ ಎರಡೂ ಕಡೆಯಿಂದಲೂ ಸರ್ವಿಸ್ ರಸ್ತೆ ಆಗಿಲ್ಲ. ಇಲ್ಲಿನ ಪರಿಸರದಲ್ಲಿ 3-4 ಸಭಾಭವನಗಳಿದ್ದು, ತ್ರಾಸಿ ಕಡಲ ತೀರದ ತನಕ ಸರ್ವಿಸ್ ರಸ್ತೆಯಾದರೆ ತ್ರಾಸಿಯಿಂದ ಬರುವವರಿಗೆ ಅನುಕೂಲವಾಗಲಿದೆ.
ಹೆದ್ದಾರಿ ಅವ್ಯವಸ್ಥೆಯಿಂದಾಗಿ ಇಲ್ಲಿರುವ ಒಳ ರಸ್ತೆಗಳಿಗೆ ತುಂಬಾ ಸಮಸ್ಯೆಯಾಗುತ್ತಿದೆ. ಇಲ್ಲಿನ ರೆಸಿಡೆನ್ಶಿಯಲ್ ರಸ್ತೆ, ಮಹಾಗಣಪತಿ ಸಭಾಭವನಕ್ಕೆ ಹೋಗುವ ರಸ್ತೆಗಳಲ್ಲಿ ಹೆದ್ದಾರಿಯ ಮಳೆ ನೀರು ಹರಿದು ಹೋಗುತ್ತಿದೆ. ಹೆದ್ದಾರಿಯಿಂದ ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲ. ಇದರಿಂದ ಹೆದ್ದಾರಿ ಕಡೆಯಿಂದ ಹರಿಯುವ ಮಳೆ ನೀರು, ಇಲ್ಲಿರುವ ತಗ್ಗು ಪ್ರದೇಶಗಳ ಕೃಷಿ ಭೂಮಿಗೆ ನುಗ್ಗಿ ಹಾನಿಯಾಗುತ್ತಿದೆ. ಇಲ್ಲಿರುವ 30ಕ್ಕೂ ಹೆಚ್ಚು ಕೃಷಿಕರಿಗೆ ಪ್ರತೀ ವರ್ಷ ಸಮಸ್ಯೆಯಾಗುತ್ತಿದೆ.
ಸರಿಯಾದ ಚರಂಡಿ ವ್ಯವಸ್ಥೆಯಿಲ್ಲದೆ ಮಳೆಗಾಲದಲ್ಲಿ ಸಮಸ್ಯೆಯಾಗುತ್ತಿದೆ. ಮಳೆ ನೀರೆಲ್ಲ ಪರಿಸರದ ಮನೆ ಅಂಗಳ, ಕಟ್ಟಡಗಳ ಆವರಣದೊಳಗೆ ಬರುತ್ತಿದೆ. ಅಣ್ಣಪ್ಪಯ್ಯ ಸಭಾಭವನದವರೆಗೆ ಚರಂಡಿಯಿದ್ದು, ಈ ಮೋರಿಯಿಂದ ಅಲ್ಲಿಯವರೆಗೆ ಸಮರ್ಪಕ ಚರಂಡಿ ಮಾಡಿದರೆ, ನೀರು ಸರಾಗ ಹರಿದು ಹೋಗಲು ಸಾಧ್ಯವಾಗುತ್ತದೆ. ಅರೆಬರೆ ಕಾಮಗಾರಿಯಿಂದ ಜನರಿಗೆ ತೊಂದರೆಯಾಗುತ್ತಿದೆ. ಆದಷ್ಟು ಬೇಗ ಇದನ್ನು ಸರಿಪಡಿಸಲಿ. -ಪರಮೇಶ್ವರ್ ಜಿ.ಬಿ. ತ್ರಾಸಿ, ಸ್ಥಳೀಯರು https://www.vijayavani.net/kalya-mallayabettu-kuntadi-connection-road https://www.vijayavani.net/udupi-taluk-kasapa-sammelan-invitation-card-released-by-the-district-collector-dr-k-vidyakumari