ದೆಹಲಿಯಲ್ಲಿ ವೈಎಸ್ ಜಗನ್ ಪ್ರತಿಭಟನೆಗೆ 'ಇಂಡಿಯಾ' ಮೈತ್ರಿಕೂಟ ನಾಯಕರ ಬೆಂಬಲ: 'ಡ್ರಾಮ' ಎಂದ ಟಿಡಿಪಿ

jagan
Published on

ನವದೆಹಲಿ: ಆಂಧ್ರ ಪ್ರದೇಶದಲ್ಲಿ ರಾಜಕೀಯ ಹಿಂಸಾಚಾರ ಖಂಡಿಸಿ ವೈಎಸ್‌ಆರ್‌ಸಿಪಿ ಮುಖ್ಯಸ್ಥ ವೈಎಸ್ ಜಗನ್ ಮೋಹನ್ ರೆಡ್ಡಿ ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಇಂಡಿಯಾ ಬಣದ ಸದಸ್ಯರು ಮತ್ತು ಎಐಎಡಿಎಂಕೆ ನಾಯಕರು ಬೆಂಬಲ ಸೂಚಿಸಿದ್ದಾರೆ.

ಆಂಧ್ರ ಪ್ರದೇಶದಲ್ಲಿ ಅಧಿಕಾರದಲ್ಲಿರುವ ಮತ್ತು ಎನ್​ಡಿಎ ಮೈತ್ರಿಕೂಟದದಲ್ಲಿರುವ ತೆಲುಗು ದೇಶಂ ಪಕ್ಷವು (ಟಿಡಿಪಿ) ಈ ಆರೋಪಗಳನ್ನು ತಳ್ಳಿಹಾಕಿದೆ, ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ನಾಯಕ "ನಕಲಿ ಡ್ರಾಮ'' ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.  ಇತ್ತೀಚಿನ ವಿಧಾನಸಭೆ ಚುನಾವಣೆ ಬಳಿಕ ಆಂಧ್ರ ಪ್ರದೇಶದಲ್ಲಿ ರಾಜಕೀಯ ಹಿಂಸಾಚಾರಗಳು ಹೆಚ್ಚಾಗಿದ್ದು ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ ಎಂದು ಆರೋಪಿಸಿ ಮಾಜಿ ಸಿಎಂ ಜಗನ್ ಧರಣಿ ನಡೆಸಿದ್ದಾರೆ.

ಯಾರೆಲ್ಲ ಬೆಂಬಲ?: ಸಮಾಜವಾದಿ ಪಕ್ಷದ (ಎಸ್‌ಪಿ) ವರಿಷ್ಠ ಅಖಿಲೇಶ್ ಯಾದವ್, ಶಿವಸೇನೆ (ಯುಬಿಟಿ) ನಾಯಕರಾದ ಸಂಜಯ್ ರಾವುತ್ ಮತ್ತು ಪ್ರಿಯಾಂಕಾ ಚತುರ್ವೇದಿ, ಟಿಎಂಸಿಯ ನಾಡಿಮುಲ್ ಹಕ್ ಮತ್ತು ಎಐಎಡಿಎಂಕೆಯ ಎಂ ತಂಬಿದುರೈ, ದೆಹಲಿ ಮತ್ತು ಪಂಜಾಬ್‌ನ ಆಮ್ ಆದ್ಮಿ ಪಕ್ಷದಂತಹ ವಿವಿಧ ಪಕ್ಷಗಳ ನಾಯಕರು ಆಂಧ್ರಪ್ರದೇಶದಲ್ಲಿ ವೈಎಸ್‌ಆರ್‌ಸಿಪಿ ಕಾರ್ಯಕರ್ತರ ಮೇಲೆ ನಡೆದ ದಾಳಿಯನ್ನು ಖಂಡಿಸಿದ್ದಾರೆ.

ಆಂಧ್ರದಲ್ಲಿ ನಡೆಯುತ್ತಿರುವ ಹಲ್ಲೆಗಳ ಸಂಬಂಧಿಸಿದ ಯಾವುದೇ ಚಿತ್ರಗಳು, ವಿಡಿಯೋಗಳನ್ನು ನಾನು ನೋಡಿಲ್ಲ. ಆದರೆ ಅಧಿಕಾರದಲ್ಲಿರುವವರು ಸರಳತೆಯನ್ನು ರೂಢಿಸಿಕೊಳ್ಳಬೇಕು. ಇತರರ ಮಾತನ್ನು ಕೇಳಿಸಿಕೊಳ್ಳಬೇಕೆ ಹೊರೆತು ಅವರ ಪ್ರಾಣವನ್ನು ತೆಗೆಯಬಾರದು ಎಂದು ಅಖಿಲೇಶ್​ ಯಾದವ್ ಹೇಳಿದ್ದಾರೆ.

ವಿರೋಧ ಪಕ್ಷದ ಕಾರ್ಯಕರ್ತರ ಮೇಲಿನ ಕ್ರೂರ ದಾಳಿಯ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ಆಂಧ್ರಪ್ರದೇಶಕ್ಕೆ ಕಳುಹಿಸಬೇಕು" ಎಂದು ರಾವುತ್ ಹೇಳಿದರು.

ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದೆಗಟ್ಟಿದೆ: ತಮಿಳುನಾಡಿನಲ್ಲೂ ಇದೇ ಪರಿಸ್ಥಿತಿ ಇದೆ ಎಂದಿರುವ ತಂಬಿದುರೈ "200 ದಿನಗಳಲ್ಲಿ 595 ಜನರ ಕೊಲೆ ಮಾಡಲಾಗಿದೆ. ಇದು ಅಲ್ಲಿನ ಕಾನೂನು-ಸುವ್ಯವಸ್ಥೆ ಪರಿಸ್ಥಿತಿಯಾಗಿದೆ. ತಮಿಳುನಾಡಿನಲ್ಲಿ ಡಿಎಂಕೆ ದೌರ್ಜನ್ಯಕ್ಕೆ ಹಲವರು ಸಾವನ್ನಪ್ಪಿದ್ದಾರೆ ಎಂದು ಅವರು. ತಮಿಳುನಾಡು ಮತ್ತು ಆಂದ್ರಪ್ರದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯಗಳ ಕುರಿತಂತೆ ಕ್ರಮಕ್ಕೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.

ಜಗನ್ ಪ್ರತಿಭಟನೆಗೆ ಟಿಡಿಪಿ ಪಕ್ಷದ ಸಂಸದರು ಟೀಕೆ: ಆಂಧ್ರ ಮಾಜಿ ಸಿಎಂ ಜಗನ್ ಪ್ರತಿಭಟನೆಗೆ ಪ್ರತಿಯಾಗಿ ಸುದ್ದಿಗೋಷ್ಠಿ ನಡೆಸಿದ ಟಿಡಿಪಿ ಸಂಸದರು ರೆಡ್ಡಿ ರಾಜಕೀಯದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಟೀಕಿಸಿದರು.  ದಿಕ್ಕು ತಪ್ಪಿಸುವ ರಾಜಕಾರಣ ಮಾಡಲು ಜಗನ್ ದಿಲ್ಲಿಗೆ ಬಂದಿದ್ದಾರೆ. ತಮ್ಮ ಅಧಿಕಾರಾವಧಿಯಲ್ಲಿ ಟಿಡಿಪಿ ಸದಸ್ಯರನ್ನು ಗುರಿಯಾಗಿಸಿಕೊಂಡು ಹಿಂಸಾಚಾರ ನಡೆಸುವುದರಲ್ಲಿ ನಿರತರಾಗಿದ್ದರು.ಟಿಡಿಪಿ ಸಂಸದ ಬಿ.ನಾಗರಾಜು ವಾಗ್ದಾಳಿ ನಡೆಸಿದರು, ದೆಹಲಿಯಲ್ಲಿ ಪ್ರತಿಭಟನೆ ಮಾಡುವ ಬದಲು ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಸಮಸ್ಯೆಗಳನ್ನು ಪ್ರಸ್ತಾಪಿಸುವಂತೆ ಅವರು ರೆಡ್ಡಿಯನ್ನು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net