

ವಿಜಯವಾಣಿ ಸುದ್ದಜಾಲ ಉಡುಪಿ
ನಾವೆಲ್ಲರೂ ನಮ್ಮ ಕರ್ಮಗಳನ್ನಷ್ಟೇ ಮಾಡಲು ಹುಟ್ಟಿಬಂದವರು. ಸಮಾಜದಿಂದ ಸಾಕಷ್ಟು ಪಡೆದಿದ್ದೇವೆ. ಹೀಗಾಗಿ ಸಾಧ್ಯವಾಗುವವರೆಗೆ ಸಮಾಜಕ್ಕಾಗಿ ಕರ್ಮ ಮಾಡುತ್ತ ಸಾಗಬೇಕು. ಅದಕ್ಕಾಗಿ ಯಾವುದೇ ಫಲ ಅಪೇಕ್ಷಿಸಬಾರದು. ಸಮಾಜಕ್ಕಾಗಿ ನಾನು ನನ್ನ ಕರ್ತವ್ಯವನ್ನಷ್ಟೇ ಮಾಡಿದ್ದೇನೆ ಎಂದು ಸಮಾಜ ಸೇವಕ ಅಲೆವೂರು ಪದ್ಮನಾಭ ಕೊಡಂಚ ನುಡಿದರು.
ಉಡುಪಿಯ ಯಕ್ಷಗಾನ ಕಲಾರಂಗದ ಐವೈಸಿ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾರಂಭದಲ್ಲಿ ಯಕ್ಷಗಾನ ಕಲಾರಂಗದಲ್ಲಿ 27 ವರ್ಷ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಎಸ್.ಗೋಪಾಲಕೃಷ್ಣ ಸ್ಮರಣಾರ್ಥ ಸಂಸ್ಥೆ ವತಿಯಿಂದ ಕೊಡಮಾಡಿದ ಸೇವಾಭೂಷಣ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಬಳಕೆದಾರರ ವೇದಿಕೆಯ ವಿಶ್ವಸ್ಥ ಎನ್. ರಾಮ ಭಟ್ಟ ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿ, ಅಭಿನಂದಿಸಿದರು. ಚಂದ್ರಾವತಿ ಪಿ. ಕೊಡಂಚ ಉಪಸ್ಥಿತರಿದ್ದರು. ಎಸ್. ಗೋಪಾಲಕೃಷ್ಣ ಅವರ ಕುಟುಂಬಸ್ಥರು, ಬಳಕೆದಾರರ ವಿಶ್ವಸ್ಥರು, ಕಾರ್ಯಕರ್ತರು, ಸಂಸ್ಥೆಯ ದಾನಿಗಳು ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರ್ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಎಚ್. ಎನ್. ಶೃಂಗೇಶ್ವರ್ ಸಹಕರಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಪೋರೇಷನ್ ಬ್ಯಾಂಕ್ನಿಂದ ನಿವೃತ್ತನಾದ ಬಳಿಕ ಕೊಡಂಚ ಅವರು ಎರಡೂವರೆ ದಶಕಗಿಂತಲೂ ಹೆಚ್ಚು ಕಾಲ ಬಳಕೆದಾರರ ವೇದಿಕೆಯಲ್ಲಿ ಸೇವೆ ಸಲ್ಲಿಸಿ, ಸಾವಿರಾರು ಸಂತ್ರಸ್ತರಿಗೆ ಸೂಕ್ತ ಮಾರ್ಗದರ್ಶನ ಮಾಡಿದ್ದಾರೆ. ಬಳಕೆದಾರರಿಗಾಗಿ ಅನೇಕ ಕಮ್ಮಟ, ಕಾರ್ಯಾಗಾರ ಆಯೋಜಿಸಿದ್ದಲ್ಲದೆ, 'ಗ್ರಾಹಕ ಜಾಗೃತಿ' ಎಂಬ ಕೃತಿಯ ಮೂಲಕವೂ ಗ್ರಾಹಕರಿಗೆ ಸಹಕಾರ ಮಾಡಿದ್ದಾರೆ. ಅವರೊಬ್ಬ ಮೌನ ಸಾಧಕ. | ಮುರಳಿ ಕಡೆಕಾರ್. ಯಕ್ಷಗಾನ ಕಲಾರಂಗದ ಕಾರ್ಯದರ್ಶಿ