ಕೊಡಗಿನಲ್ಲಿ ಶಕ್ತಿ ಯೋಜನೆಗೆ ಹಿನ್ನಡೆ

BOJANNA SOMAIHA
Published on

ಮಡಿಕೇರಿ: ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಮಹಿಳೆಯರ ಉಚಿತ ಪ್ರಯಾಣದ ಶಕ್ತಿ ಯೋಜನೆ ಬಸ್‌ಗಳ ಕೊರತೆಯಿಂದ ಕೊಡಗು ಜಿಲ್ಲೆಯಲ್ಲಿ ಹಿನ್ನಡೆಯನ್ನು ಅನುಭವಿಸುತ್ತಿದೆ. ಯೋಜನೆಯ ಲಾಭ ಎಲ್ಲಾ ಮಹಿಳೆಯರಿಗೆ ದೊರೆಯುತ್ತಿಲ್ಲವೆಂದು ಆಮ್ ಆದ್ಮಿ ಪಾರ್ಟಿಯ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಟೀಕಿಸಿದ್ದಾರೆ.


ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಳೆದ ಐದು ತಿಂಗಳಿನಿಂದ ಶಕ್ತಿ ಯೋಜನೆ ಜಾರಿಯಲ್ಲಿದ್ದರೂ ಬಸ್‌ಗಳ ಕೊರತೆ ಮತ್ತು ಗ್ರಾಮೀಣ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಇಲ್ಲದೆ ಇರುವುದರಿಂದ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯ ಶೇ.೭೦ ರಷ್ಟು ಮಹಿಳೆಯರಿಗೆ ಇದರ ಪ್ರಯೋಜನ ದೊರೆಯುತ್ತಿಲ್ಲವೆಂದು ಗಮನ ಸೆಳೆದಿದ್ದಾರೆ.


ಜಿಲ್ಲೆಯಲ್ಲಿ ಗ್ರಾಮೀಣ ಪ್ರದೇಶಗಳೇ ಹೆಚ್ಚು ಇದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸೇವೆ ಗ್ರಾಮಗಳಿಗೆ ಲಭ್ಯವಿಲ್ಲ. ಗ್ರಾಮಸ್ಥರು ಮುಖ್ಯ ರಸ್ತೆಗೆ ಬರಬೇಕೆಂದರೆ ೧೦-೧೨ ಕಿ.ಮೀ ದೂರ ನಡೆಯಲೇಬೇಕಾಗಿದೆ. ಕೆಎಸ್‌ಆರ್‌ಟಿಸಿ ಸೇವೆಯ ನ್ಯೂನತೆ ಮತ್ತು ಬಸ್‌ಗಳ ಕೊರತೆಯಿಂದ ಶಕ್ತಿ ಯೋಜನೆ ಕೊಡಗು ಜಿಲ್ಲೆಗೆ ನಿಷ್ಪ್ರಯೋಜಕವಾಗಿದೆ. ಜನಜಂಗುಳಿಯ ನಡುವೆ ಉಸಿರುಗಟ್ಟಿಸುವ ವಾತಾವರಣದಲ್ಲಿ ಪ್ರಯಾಣಿಸಬೇಕಾದ ದುಸ್ಥಿತಿ ಬಂದೊದಗಿದ್ದು, ಪ್ರಯಾಣಿಕರ ನಡುವೆ ಕಲಹವೂ ಏರ್ಪಡುತ್ತಿದೆ ಎಂದು ತಿಳಿಸಿದ್ದಾರೆ.


ಸರ್ಕಾರ ಯೋಜನೆಗೆ ತಕ್ಕಂತೆ ಬಸ್‌ಗಳನ್ನು ನಿಯೋಜಿಸದೆ ಇರುವುದರಿಂದ ಈ ಸಮಸ್ಯೆಗಳು ಉದ್ಭವಿಸಿದ್ದು, ಕೊಡಗಿನ ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿ ಹೆಚ್ಚುವರಿ ಬಸ್‌ಗಳು ಸಂಚರಿಸುವಂತೆ ನೋಡಿಕೊಳ್ಳಬೇಕು. ಸರ್ಕಾರ ತಕ್ಷಣ ಎಚ್ಚೆತ್ತುಕೊಂಡು ಬಸ್‌ಗಳ ಕೊರತೆ ನೀಗಿಸಿ ಶಕ್ತಿ ಯೊಜನೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಕೊಡಗಿನ ಎಲ್ಲಾ ಮಹಿಳೆಯರಿಗೆ ಯೋಜನೆಯ ಲಾಭ ಸಿಗಲು ಗ್ರಾಮೀಣ ಭಾಗದಲ್ಲೂ ಕೆಎಸ್‌ಆರ್‌ಟಿಸಿ ಬಸ್ ಗಳ ಸೇವೆ ಆರಂಭಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net