

ಬೆಂಗಳೂರು: ಹೊಸ ಸರ್ಕಾರ ರಚನೆಯಾಗಿ ಆಡಳಿತ ವ್ಯವಸ್ಥೆಯನ್ನು ನಿಯಂತ್ರಣಕ್ಕೆ ಪಡೆದುಕೊಳ್ಳುತ್ತಿರುವ ಹೊತ್ತಿನಲ್ಲೇ ವಿಧಾನ ಮಂಡಲ ಅಧಿವೇಶನ ಸೋಮವಾರದಿಂದ ಆರಂಭವಾಗುತ್ತಿದೆ. ಚುನಾವಣೆ ಜಯಭೇರಿಯೊಂದಿಗೆ ಉತ್ಸಾಹದಲ್ಲಿರುವ ಕಾಂಗ್ರೆಸ್ ನಾಯಕರು, ಫಲಿತಾಂಶ ಬಂದು 50 ದಿನ ಕಳೆದರೂ ಪ್ರತಿಪಕ್ಷದ ನಾಯಕ ಆಯ್ಕೆ ಮಾಡಿಕೊಳ್ಳಲಾಗದ ಬಿಜೆಪಿ ಮೇಲೆ ಸವಾರಿ ನಡೆಸಿ ಇನ್ನಷ್ಟು ಆತ್ಮಸ್ಥೈರ್ಯ ಕುಗ್ಗಿಸಲು ಸಜ್ಜಾಗಿದ್ದಾರೆ.
ಅಧಿವೇಶನದ ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಮಾತಾಡಲಿದ್ದಾರೆ. ರಾಜ್ಯದ ಮುಂದಿನ ಪಥವನ್ನು ಸೂಕ್ಷ್ಮವಾಗಿ ತಿಳಿಸಲಿದ್ದಾರೆ. ಇದೇ ವೇಳೆ ರಾಜ್ಯಪಾಲರ ಭಾಷಣ ಸಿದ್ಧಪಡಿಸಿಕೊಡುವ ಸರ್ಕಾರ, ರಾಜಕೀಯ ಒಳಸುಳಿಗಳನ್ನು ತುರುಕುವುದೂ ಸಹ ಸಾಮಾನ್ಯ ಸಂಗತಿ. ಈ ಬಾರಿಯೂ ಅಂತಹದ್ದೊಂದು ಬೆಳವಣಿಗೆ ನಿರೀಕ್ಷಿಸಬಹುದಾಗಿದೆ. ಪ್ರಮುಖವಾಗಿ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು ನೆನಪಿಸುವ ಕೆಲಸವಾಗಲಿದೆ.
ರಾಜ್ಯಪಾಲರು ಭಾಷಣ ಮುಗಿಸಿ ತೆರಳಿದ ಬಳಿಕ ವಿಧಾನ ಸಭೆ ಹಾಗೂ ವಿಧಾನ ಪರಿಷತ್ ಪ್ರತ್ಯೇಕವಾಗಿ ಸಮಾವೇಶಗೊಂಡು ಸಂತಾಪ ಸೂಚಿಸಲಿವೆ. ಕಳೆದ ಅಧಿವೇಶನದಿಂದ ಈ ಅಧಿವೇಶನದವರೆಗೆ ನಿಧನರಾದ ಶಾಸಕರು, ರಾಜಕೀಯ ಪ್ರಮುಖರು, ವಿವಿಧ ಕ್ಷೇತ್ರದ ಗಣ್ಯರನ್ನು ಈ ವೇಳೆ ನೆನಪಿಸಿಕೊಳ್ಳಲಾಗುತ್ತದೆ.
ಮಂಗಳವಾರದಿಂದ ವಿಧಾನಸಭೆ ಹಾಗೂ ವಿಧಾನ ಪರಿಷತ್ ರಾಜಕೀಯ ಕದನಕ್ಕೆ ವೇದಿಕೆಯಾಗಲಿದೆ. ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ಠೇಂಕರಿಸುತ್ತಲೇ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪುನಃ ಅದೇ ದಾಟಿಯನ್ನು ಮುಂದುವರಿಸುವ ಎಲ್ಲ ಲಕ್ಷಣವೂ ಇದೆ. ಬಿಜೆಪಿಯಲ್ಲಿನ ಆಂತರಿಕ ಕಚ್ಚಾಟ, ಗೊಂದಲಗಳು, ಒಮ್ಮತಾಭಿಪ್ರಾಯ ಮೂಡುವ ಲಕ್ಷಣ ಇಲ್ಲದ ಕಾರಣ ಪ್ರತಿಪಕ್ಷ ಅಕ್ಷರಶಃ ಕಳಾಹೀನವಾಗಿದೆ. ಸರ್ಕಾರವನ್ನು ಕೆಣಕುವ, ಬಾಯಿ ಕಟ್ಟಿಹಾಕುವ, ಹುಳುಕುಗಳನ್ನು ಎತ್ತಿ ತೋರಿಸುವ ಹಿರಿತನ ಪ್ರತಿಪಕ್ಷದ ಸಾಲಿನಲ್ಲಿ ಕಾಣಿಸುತ್ತಿಲ್ಲ. ಇದೂ ಕೂಡ ಕಾಂಗ್ರೆಸ್ ಪಾಲಿಗೆ ಸಮಾಧಾನ ತಂದಿದೆ.
ಗ್ಯಾರಂಟಿ ಯೋಜನೆ ಅನುಷ್ಠಾನದಲ್ಲಿನ ಷರತ್ತು, ಗೊಂದಲ, ಸಾರಿಗೆ ನಿಗಮ ಮತ್ತು ಎಸ್ಕಾಂಗಳ ಪರಿಸ್ಥಿತಿ ಅದೆಲ್ಲಕ್ಕಿಂತ ಮುಖ್ಯವಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಕುರಿತು ರಾಜ್ಯದ ಗಮನ ಸೆಳೆಯಲು ಪ್ರತಿಪಕ್ಷಕ್ಕೊಂದು ಪ್ರಮುಖ ಭೂಮಿಕೆ. ಆದರೆ, ಪಕ್ಷದೊಳಗಿನ ಗೊಂದಲ ಅಗತ್ಯ ತಯಾರಿಗೆ ಅವಕಾಶವೇ ಕೊಟ್ಟಂತೆ ಕಾಣಿಸಿಲ್ಲ. ಅಲ್ಲದೇ ಪ್ರತಿಪಕ್ಷ ನಾಯಕನನ್ನೇ ಕೊನೆ ಹಂತದಲ್ಲಿ ಗುರುತಿಸುತ್ತಿರುವ ಕಾರಣ ಸದನದ ಒಳಗೆ ಸರ್ಕಾರವನ್ನು ಎದುರಿಸುವುದು ಅಷ್ಟು ಸಲೀಸಲ್ಲ. ಹಾಗೆ ನೋಡಿದರೆ ಚುನಾವಣೆಯಲ್ಲಿ ತಮ್ಮ ನಿರೀಕ್ಷೆಯಂತೆ ಫಲಿತಾಂಶ ಸಿಗದ ಹಿನ್ನೆಲೆಯಲ್ಲಿ ಕಂಗಾಲಾಗಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಸರ್ಕಾರದ ವಿರುದ್ಧ ಕುದಿಯುತ್ತಿದ್ದು, ಅವರು ಕಲಾಪದಲ್ಲಿ ಪಾಲ್ಗೊಳ್ಳುವಿಕೆ ಖಾತ್ರಿಯಾದರೆ ಮೊದಲ ಅಧಿವೇಶನ ಕೊಂಚ ರೋಚಕವಾಗಿ ಕಾಣಬಹುದು ಎಂಬ ವಿಶ್ಲೇಷನೆ ರಾಜಕೀಯ ಪಡಸಾಲೆಯಲ್ಲಿದೆ.
14ನೇ ಬಜೆಟ್: ಜುಲೈ 7ರಂದು ಮುಂದಿನ ಎಂಟು ತಿಂಗಳ ಅವಧಿಗೆ ಅನ್ವಯವಾಗುವಂತೆ (ಆರ್ಥಿಕ ವರ್ಷ) ಮುಖ್ಯಮಂತ್ರಿ ಸಿದ್ದರಾಮಯ್ಯ 14ನೇ ಬಜೆಟ್ ಮಂಡಿಸಲಿದ್ದಾರೆ. ಬಳಿಕ ಜು.10ರಿಂದ 14ದಿನಗಳವರೆಗೆ ಬಜೆಟ್ ಮೇಲಿನ ಚರ್ಚೆ ನಡೆಯುವುದು.
ವಿಧಾನ ಮಂಡಲ ಅಧಿವೇಶನ ಸೌಹಾರ್ದಯುತವಾಗಿ ನಡೆಯಬೇಕು. ಎಲ್ಲರ ಸಹಕಾರ ಅತ್ಯವಶ್ಯಕ. ಅಧಿವೇಶನದಿಂದ ನಾಡಿಗೆ ಒಳಿತಾಗಬೇಕು. | ಯು.ಟಿ.ಖಾದರ್, ವಿಧಾನಸಭೆ ಅಧ್ಯಕ್ಷ
ಕೈ ಉತ್ಸಾಹ: ಹೊಸ ಸರ್ಕಾರ ರಚನೆ ಮಾಡಿರುವ ಕಾಂಗ್ರೆಸ್ ಈ ಅಧಿವೇಶನದಲ್ಲಿ ಪ್ರತಿಪಕ್ಷದ ಮೇಲೆಯೇ ಮುಗಿಬೀಳಲು ಎಲ್ಲ ರೀತಿಯಲ್ಲಿ ವಸ್ತುವಿಷಯ ಇಟ್ಟುಕೊಂಡು ಸಿದ್ಧವಾಗಿದೆ. ಸಿದ್ದರಾಮಯ್ಯ ಹಾಗೂ ಘಟಾನುಘಟಿ ಸಂಪುಟ ಸದಸ್ಯರು ಪ್ರಮುಖ ದಂಡನಾಯಕರು.
ಬಿಜೆಪಿಯಲ್ಲಿ ಮಂಕು: ದೊಡ್ಡ ಸೋಲಿನಿಂದ ಬಿಜೆಪಿ ಹೊರಬಂದಂತೆ ಕಾಣಿಸುತ್ತಿಲ್ಲ. ಕೆಲವು ಹೊಸ ಶಾಸಕರು ಅಧಿವೇಶನದ ಬಗ್ಗೆ ಕುತೂಹಲ ಇಟ್ಟುಕೊಂಡಿರುವುದು ಬಿಟ್ಟರೆ ಹಳಬರಲ್ಲಿ ಉತ್ಸಾಹ ಕಾಣಿಸುತ್ತಿಲ್ಲ. ಪ್ರತಿಪಕ್ಷದ ಕಡೆಯಿಂದ ಬೊಮ್ಮಾಯಿ ಜತೆಗೆ ಯತ್ನಾಳ್, ಸುನೀಲ್ ಪ್ರಮುಖ ಹುರಿಯಾಳುಗಳು.
ಹಠದಲ್ಲಿ ಜೆಡಿಎಸ್: ಸರ್ಕಾರದಲ್ಲಿನ ಬೆಳವಣಿಗೆ ಬಗ್ಗೆ ಪ್ರಧಾನ ಪ್ರತಿಪಕ್ಷವಾಗಿ ಬಿಜೆಪಿ ತೋರಿಸುತ್ತಿರುವ ಆಸಕ್ತಿಗಿಂತ ಜೆಡಿಎಸ್ ನಾಯಕರ ಧೋರಣೆಯೇ ಎದ್ದು ಕಾಣಿಸುತ್ತಿದೆ. ಅದರಲ್ಲೂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಕಸಿವಿಸಿ ಉಂಟುಮಾಡುವಂತ ಹಾಗೂ ಹರಿತ ಮಾತುಗಳು ನಾಡಿನ ಗಮನ ಸೆಳೆದಿದೆ.
ನೂತನ ಎಂಎಲ್ಸಿಗಳ ಪ್ರಮಾಣ ಸ್ವೀಕಾರ: ವಿಧಾನ ಪರಿಷತ್ನ ಮೂರು ಸ್ಥಾನಗಳಿಗೆ ನಡೆದ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಸಚಿವ ಎನ್.ಎಸ್. ಬೋಸರಾಜು ಹಾಗೂ ಮಾಜಿ ಶಾಸಕ ತಿಪ್ಪಣ್ಣಪ್ಪ ಕಮನನೂರ ಅವರು ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬೆಳಗ್ಗೆ 10ಕ್ಕೆ ನಡೆಯುವ ಸರಳ ಸಮಾರಂಭದಲ್ಲಿ ಪರಿಷತ್ನ ಸಭಾಪತಿ ಬಸವರಾಜ ಹೊರಟ್ಟಿ ಪ್ರಮಾಣ ವಚನ ಬೋಧಿಸುವರು.
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಜಿಎಸ್ಟಿ ಬದಲಿಗೆ ವೈಎಸ್ಟಿ ತೆರಿಗೆ ಆರಂಭವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ. ಜೆಪಿ ಭವನದಲ್ಲಿ ಮಾತನಾಡಿದ ಅವರು, ಮಧ್ಯರಾತ್ರಿವರೆಗೂ ತಮ್ಮ ಮನೆಗಳಲ್ಲಿ ಅಧಿಕಾರಿಗಳ ಸಭೆ ಮಾಡುವ ಘನಂದಾರಿ ವ್ಯಕ್ತಿಗಳು ವರ್ಗಾವಣೆ ದಂಧೆಗಾಗಿ ಯಾರನ್ನೆಲ್ಲ ಫೀಲ್ಡಿಗೆ ಇಳಿಸಿ ಗುಪ್ತ ಸಭೆಗಳನ್ನು ಮಾಡುತ್ತಿದ್ದಾರೋ ಅವರನ್ನೇ ಕೇಳಿದರೆ ವೈಎಸ್ಟಿ ಏನು ಎನ್ನುವುದು ನಿಮಗೆ ತಿಳಿಯಲಿದೆ ಎಂದರು. ಒಂದು ಸರ್ಕಾರ, ಹತ್ತಾರು ಮುಖ್ಯಮಂತ್ರಿಗಳು ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದೆ. ಸಿದ್ದರಾಮಯ್ಯ ಒಬ್ಬರೇ ಮುಖ್ಯಮಂತ್ರಿ ಅಲ್ಲ. ಇಲಾಖೆಗೊಬ್ಬ ಮುಖ್ಯಮಂತ್ರಿ ಇದ್ದಾರೆ. ಒಬ್ಬೊಬ್ಬರು ಮುಖ್ಯಮಂತ್ರಿಯಂತೆ ಹೇಳಿಕೆ ನೀಡುತ್ತಾರೆ ಎಂದು ಲೇವಡಿ ಮಾಡಿದರು. ಮಾಜಿ ಸಚಿವ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ, ಶಾಸಕಿ ಕರೆಮ್ಮ ನಾಯಕ ಮುಂತಾದವರಿದ್ದರು.
ಬಿಜಿಪಿ ವಿರೋಧಿ ಸಭೆಗೆ ಹೋಗಲ್ಲ: ನಮ್ಮದು ಸಣ್ಣ ಪಕ್ಷ. ಅದನ್ನು ಬೆಳೆಸುತ್ತೇವೆ, ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ. ಅದಕ್ಕಾಗಿ ಸರಣಿ ಸಭೆಗಳನ್ನು ಹಮ್ಮಿಕೊಂಡಿದ್ದೇವೆ. ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ವಿರೋಧಿ ಪಕ್ಷಗಳ ಸಭೆಗೆ ನಮ್ಮ ಪಕ್ಷಕ್ಕೆ ಆಹ್ವಾನ ಕೊಟ್ಟಿಲ್ಲ, ನಮ್ಮನ್ನು ಯಾರೂ ಕರೆದಿಲ್ಲ. ಹೀಗಾಗಿ ಆ ಸಭೆಗೆ ನಾವು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.