

ಕೊಲೆಗಾರನು ಶವಗಳ ತುಂಡುಗಳನ್ನು ದೆಹಲಿ ಹಾಗೂ ನೆರೆರಾಜ್ಯಗಳಲ್ಲಿ ಎಸೆಯಬೇಕಾದರೆ ಆತನ ಬಳಿ ವಾಹನವಿರಬೇಕು ಎಂದು ರ್ತಸಿ ಪರಿಶೀಲಿಸಿದಾಗ ಚಂದ್ರಕಾಂತ್ ಮೋಟರ್ ಅಳವಡಿಸಿದ್ದ ಸೈಕಲ್ ರಿಕ್ಷಾ ಹೊಂದಿದ್ದು ತಿಳಿಯಿತು. ಏತನ್ಮಧ್ಯೆ ಒಬ್ಬ ಮಾಹಿತಿದಾರ ಪೊಲೀಸರಿಗೆ ಅಲಿಪುರ್ ಬಡಾವಣೆಗೆ ಚಂದ್ರಕಾಂತ್ ಬರುತ್ತಾನೆ ಎಂದು ತಿಳಿಸಿದ ಮೇರೆಗೆ ಅಲ್ಲಿಗಾಗಮಿಸಿದ ಚಂದ್ರಕಾಂತ್ನನ್ನು ವಶಕ್ಕೆ ಪಡೆದರು. 46 ವರ್ಷದ ಚಂದ್ರಕಾಂತ್ನನ್ನು ವಿಚಾರಣೆ ಮಾಡಿದಾಗ ಆತ ತಾನೇ ಎಲ್ಲ ಕೊಲೆಗಳನ್ನೂ ಮಾಡಿದ್ದಾಗಿ ಒಪ್ಪಿಕೊಂಡ. ‘ಬಿಹಾರ್ನಲ್ಲಿ ಜನಿಸಿ ಹತ್ತನೇ ತರಗತಿಯವರೆಗೆ ಓದಿದ ನಂತರ 1986ರಲ್ಲಿ ಕೆಲಸಕ್ಕಾಗಿ ದೆಹಲಿಗೆ ಬಂದೆ. ದೆಹಲಿಯ ತರಕಾರಿ ಮಂಡಿಯಲ್ಲಿ ಕೆಲ ಸಮಯ ಕೂಲಿಕಾರನಾಗಿದ್ದು ಆನಂತರ ಸಗಟು ದರದಲ್ಲಿ ತರಕಾರಿಗಳನ್ನು ಖರೀದಿಸಿ ಅವನ್ನು ಅಂಗಡಿಗಳಿಗೆ ಮಾರುತ್ತಿದ್ದೆ’ಎಂದ.
ಹೈದರ್ಪುರ್ ಬಡಾವಣೆಯಲ್ಲಿದ್ದ ತನ್ನ ಬಾಡಿಗೆಯ ಕೋಣೆಗೆ ಪೊಲೀಸರನ್ನು ಕರೆದುಕೊಂಡು ಹೋದಾಗ ಅಲ್ಲಿಯ ನೆಲ ಮತ್ತು ಗೋಡೆಯ ಮೇಲೆ ರಕ್ತದ ಕಲೆಗಳು ಹತ್ತಿದ್ದವು. ಗೋಡೆಯ ಮೇಲೆ ಹಲವಾರು ದೂರವಾಣಿ ಸಂಖ್ಯೆಗಳನ್ನು ಬರೆಯಲಾಗಿತ್ತು. ಹೆಂಡತಿ ಮತ್ತು ಐವರು ಪುತ್ರಿಯರು ಬೇರೆ ಮನೆಯಲ್ಲಿ ವಾಸ ಮಾಡುತ್ತಿರುವರೆಂದು ಯಾರಿಗೂ ತನ್ನ ಕೃತ್ಯಗಳ ಬಗ್ಗೆ ತಿಳಿದಿಲ್ಲ ಎಂದ. ‘ಅದೇ ಕೋಣೆಯಲ್ಲಿಯೇ ಆರು ಜನರ ಹತ್ಯೆ ಮಾಡಿದೆ. ಕರಾಟೆ ಪಟುಗಳು ಉಪಯೋಗಿಸುವ ನನ್ಚಕ್ಕೂ ಎನ್ನುವ ಮರದ ಹಿಡಿಯಿರುವ ಕಬ್ಬಿಣದ ಚೈನನ್ನು ವ್ಯಕ್ತಿಯ ಕೊರಳಿಗೆ ಹಿಂದಿನಿಂದ ಹಾಕಿ ಉಸಿರುಕಟ್ಟಿಸಿ ಸಾಯಿಸುತ್ತಿದ್ದೆ, ಆನಂತರ ಶವಗಳನ್ನು ಕತ್ತರಿಸಲು ಕಟುಕರು ಬಳಸುವ ಚಾಕುಗಳನ್ನು ಬಳಸುತ್ತಿದ್ದೆ’ ಎಂದು ಹೇಳಿ ಮೂರು ರಕ್ತಸಿಕ್ತ ಚಾಕುಗಳನ್ನು ಪೊಲೀಸರಿಗೆ ತೋರಿಸಿದ. ಕೋಣೆಯಲ್ಲಿದ್ದ ಒಂದು ಮೊಬೈಲ್ ಫೋನ್ ತಾನು ಕೊಲೆ ಮಾಡಿದ್ದ ಉಪೇಂದ್ರನದು ಮತ್ತು ಬೀರುವಿನಲ್ಲಿದ್ದ ಜೀನ್ಸ್ ಪ್ಯಾಂಟು ಇತ್ತೀಚೆಗಷ್ಟೇ ಕೊಲೆಮಾಡಿದ ದಿಲೀಪ್ನದ್ದು ಎಂದ.
‘1997ರಲ್ಲಿ ದೆಹಲಿ ಪೊಲೀಸರು ನನ್ನ ಮೇಲೆ ಮೂರು ಬಾರಿ ಸುಳ್ಳು ಕಳ್ಳತನದ ಪ್ರಕರಣಗಳನ್ನು ದಾಖಲಿಸಿದ್ದು ಅವೆಲ್ಲಾ ಪ್ರಕರಣಗಳಲ್ಲಿಯೂ ಖುಲಾಸೆಗೊಂಡಿದ್ದೇನೆ. 1998ರಲ್ಲಿ ಮಂಗಲ್ ಎನ್ನುವವನ ಕೊಲೆಯ ಸುಳ್ಳು ಆರೋಪದ ಮೇಲೆ ನನ್ನನ್ನು ತಿಹಾರ್ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿ ಇಡಲಾಗಿತ್ತು. ಆಗ ಪೊಲೀಸರು ಮತ್ತು ಜೈಲಿನ ಅಧಿಕಾರಿಗಳು ಕಿರುಕುಳ ಕೊಟ್ಟರು. ನಾನು ನಿದೋಷಿಯೆಂದು ಬಿಡುಗಡೆಗೊಂಡ ನಂತರ ಪೊಲೀಸರಿಗೆ ಬುದ್ಧಿ ಕಲಿಸಬೇಕೆಂದು ಕೊಲೆಮಾಡತೊಡಗಿದೆ’ ಎಂದು ಚಂದ್ರಕಾಂತ್ ಹೇಳಿದ.
‘ನೀನು ಕೊಲೆ ಮಾಡಿದವರು ಯಾರು, ಅವರನ್ನು ಏಕೆ ಕೊಲೆ ಮಾಡಿದೆ?’ ಎಂದು ಪ್ರಶ್ನಿಸಿದಾಗ ಕೆಲಸ ಹುಡುಕಿಕೊಂಡು ದೆಹಲಿಗೆ ಬರುವ ಯುವಕರಿಗೆ ಆಶ್ರಯ ಕೊಡುತ್ತಿದ್ದೆ, ಅವರು ದುರ್ವರ್ತನೆ ಮಾಡಿದಾಗ ಕೊಲೆ ಮಾಡುತ್ತಿದ್ದೆ. ನಂತರ ದೇಹವನ್ನು ಕತ್ತರಿಸುತ್ತಿದ್ದೆ. ಕತ್ತರಿಸಿದ ದೇಹದ ತುಂಡುಗಳನ್ನು ಪೆಟ್ಟಿಗೆಗಳಲ್ಲಿ ಪ್ಯಾಕ್ ಮಾಡಿ ಬೆಳಗಿನ 3 ಗಂಟೆಯ ವೇಳೆಗೆ ನನ್ನ ರಿಕ್ಷಾದಲ್ಲಿ ಹಾಕಿಕೊಂಡು ತಿಹಾರ್ ಜೈಲು, ಯಮುನಾ ನದಿ ಮತ್ತಿತರ ಕಡೆ ಎಸೆಯುತ್ತಿದೆ’ಎಂದು ಚಂದ್ರಕಾಂತ್ ವಿವರಿಸಿದ.
‘2003ರ ಜೂನ್ನಲ್ಲಿ ಶೇಖರ್ ಎನ್ನುವವನನ್ನು ಕೊಲೆ ಮಾಡಿ ಅವನ ದೇಹವನ್ನು ಅಲಿಪುರದ ಕಾಲುವೆಯಲ್ಲೆಸೆದೆ. ಆತ ಮದ್ಯವ್ಯಸನಿಯಲ್ಲದೇ ಸುಳ್ಳನ್ನು ಹೇಳುತ್ತಿದ್ದ. ಅದೇ ನವೆಂಬರ್ನಲ್ಲಿ ನನ್ನೊಡನೆ ಕೆಲಸ ಮಾಡುತ್ತಿದ್ದ ಉಮೇಶ್ ಎನ್ನುವವನನ್ನು ಹತ್ಯೆಗೈದೆ. ಆತ ಸುಳ್ಳುಗಾರನಾಗಿದ್ದನಲ್ಲದೇ ನನಗೆ ಮೋಸ ಮಾಡಿದ್ದ. ಉಮೇಶ್ನ ದೇಹವನ್ನು ಕತ್ತರಿಸಿ ತಿಹಾರ್ ಜೈಲಿನ ಒಂದನೇ ಗೇಟಿನ ಮುಂದೆ ಎಸೆದೆ’ ಎಂದು ಹೇಳಿದ ಚಂದ್ರಕಾಂತ್, ಉಮೇಶ್ನ ದೇಹದ ಇತರ ತುಂಡುಗಳನ್ನು ಎಸೆದಿದ್ದ ಜಾಗಗಳನ್ನೂ ಪೊಲೀಸರಿಗೆ ತೋರಿಸಿದ. ‘2005ರ ನವೆಂಬರ್ನಲ್ಲಿ ಗುಡ್ಡು ಎನ್ನುವವನ ದೇಹವನ್ನು ಸಾರ್ವಜನಿಕ ಶೌಚಗೃಹವೊಂದರಲ್ಲಿ ಎಸೆದೆ. ಗುಡ್ಡು ಗಾಂಜಾ ಸೇದುತ್ತಿದ್ದುದು ಹೇಸಿಗೆ ತರಿಸಿದ ಕಾರಣ ಅವನನ್ನು ಕೊಂದೆ. 2006ರ ಅಕ್ಟೋಬರ್ನಲ್ಲಿ ಅಮಿತ್ ಎನ್ನುವವನನ್ನು ಕೊಲೆ ಮಾಡಿದೆ. ಬಿಹಾರದವನೇ ಆಗಿದ್ದ ಆತನೂ ಕ್ರಿಮಿನಲ್ ಪ್ರಕರಣವೊಂದರಲ್ಲಿ ಸಿಕ್ಕಿಹಾಕಿಕೊಂಡಿದ್ದ. ಆತ ನನ್ನಿಂದ ಸಾಲವಾಗಿ ಪಡೆದ ಹಣವನ್ನು ತೀರಿಸಿರಲಿಲ್ಲ. ಅಲ್ಲದೆ ಹೆಣ್ಣುಬಾಕನಾಗಿದ್ದ’ ಎಂದು ಹೇಳಿದ.
‘ಉಪೇಂದ್ರ ಎಂಬಾತ ನನ್ನ ಸ್ನೇಹಿತನ ಮಗಳೊಡನೆ ಅನೈತಿಕ ಸಂಬಂಧ ಬೆಳೆಸಿದ ಕಾರಣ ಆತನನ್ನು 2007ರ ಏ.5ರಂದು ಕೊಲೆ ಮಾಡಿದೆ. ದಿಲೀಪ್ ಎಂಬಾತ ಎಲ್ಲ ಬಗೆಯ ಪ್ರಾಣಿಗಳ ಮಾಂಸ ತಿನ್ನುತ್ತಿದ್ದುದು ನನಗೆ ಅಸಹ್ಯವಾದ ಕಾರಣ 2007ರ ಮೇನಲ್ಲಿ ಕೊಲೆ ಮಾಡಿದೆ’ ಎಂದ. ಉಪೇಂದ್ರ ಮತ್ತು ದಿಲೀಪರ ತಲೆಗಳನ್ನು ಯಮುನಾ ನದಿಯಲ್ಲಿ ಎಸೆದಿದ್ದ ಜಾಗವನ್ನು ತೋರಿಸಿದ. ಪೊಲೀಸರು ನದಿಯಲ್ಲಿ ಹುಡುಕಿದಾಗ ಎರಡು ತಲೆಬುರುಡೆಗಳು ಸಿಕ್ಕವು. ಆತ ಕೊಲೆ ಮಾಡಲು ಯಾವುದೇ ಕಾರಣ ಬೇಕಾಗಿರಲಿಲ್ಲ, ಸಣ್ಣ ಕಾರಣಕ್ಕಾಗಿಯೂ ಕೊಲೆ ಮಾಡುತ್ತಿದ್ದೆ ಎಂದಾಗ ತನಿಖಾಧಿಕಾರಿ ಗಾಬರಿಯಾದರು.
ಬಿಹಾರದ ಅಮಿತ್ ಮೊಂಡಲ್ನನ್ನು 2003ರ ಜನವರಿಯಲ್ಲಿ ಅಪರಾಧವೊಂದಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತೆಂದು ಚಂದ್ರಕಾಂತ್ ತಿಳಿಸಿದ್ದ ಕಾರಣ ಪೊಲೀಸರು ತಮ್ಮ ಕಡತಗಳಿಂದ ಆತನ ವಿವರಗಳನ್ನು ಸಂಗ್ರಹಿಸಿ ಅವನ ಮಾತಾಪಿತರನ್ನು ದೆಹಲಿಗೆ ಕರೆಸಿ ಡಿ.ಎನ್.ಎ ಹೋಲಿಕೆಯ ಮೂಲಕ ಬುಟ್ಟಿಯಲ್ಲಿ ಕಟ್ಟಿದ್ದ ಮುಂಡವು ಅವನದೇ ಎಂದು ಸಾಬೀತು ಪಡಿಸಿದರು.
ಚಂದ್ರಕಾಂತನ ಮನೆಯಲ್ಲಿದ್ದ ಸೆಲ್ ಫೋನ್ನ ಕರೆ ವಿನಿಮಯ ದಾಖಲೆಗಳನ್ವಯ ರಾಜಸ್ಥಾನ ಮೂಲದ ಪಂಕಜ್ ಎನ್ನುವವನನ್ನು ಪತ್ತೆಮಾಡಿದಾಗ ಆತ ತನ್ನ ಸೋದರ ಉಪೇಂದ್ರ ರಾಥೋಡ್ ಚಂದ್ರಕಾಂತನ ಜತೆಯಲ್ಲಿ ವಾಸಮಾಡುತ್ತಿದ್ದುದಾಗಿ ತಿಳಿಸಿದ. ಸೋದರ ನಾಪತ್ತೆಯಾದಾಗ ತಾನು ಚಂದ್ರಕಾಂತನಿಗೆ ಫೋನ್ ಮಾಡಿದಾಗ ಆತ ‘ಉಪೇಂದ್ರನನ್ನು ಅವನ ಕರ್ಮ ಎಲ್ಲಿಗೆ ಒಯ್ಯಿತೋ ಅಲ್ಲಿಗೆ ಕಳುಹಿಸಿದೆ’ ಎಂದು ಹೇಳಿದ್ದಾಗಿ ತಿಳಿಸಿದ. ಪಂಕಜ್ನ ಮೂಲಕ ಉಪೇಂದ್ರನ ದೇಹವನ್ನು ಗುರುತಿಸಲಾಯಿತು. ಚಂದ್ರಕಾಂತನ ಮನೆಯ ಗೋಡೆಯ ಮೇಲೆ ಬರೆಯಲಾಗಿದ್ದ ಫೋನ್ ನಂಬರ್ಗಳ ಮೂಲಕ ಕಟ್ಟ ಕಡೆಯಲ್ಲಿ ಕೊಲೆಯಾದ ದಿಲೀಪನ ಕುಟುಂಬದವರನ್ನೂ ಪತ್ತೆಮಾಡಲಾಯಿತು. ಆದರೆ ಯಮುನಾ ನದಿಯಲ್ಲಿ ಸಿಕ್ಕ ತಲೆಬುರುಡೆಯಾಗಲೀ ಅಥವಾ ತಿಹಾರ್ ಜೈಲಿನ ಮುಂದಿದ್ದ ಪೆಟ್ಟಿಗೆಯಲ್ಲಿದ್ದ ದೇಹದ ಡಿಎನ್ಎಯಾಗಲಿ ಅವನ ಡಿಎನ್ಎಗೆ ಹೋಲಲಿಲ್ಲ. ಆದರೆ ದಿಲೀಪನ ಜೀನ್ಸ್ ಪ್ಯಾಂಟನ್ನು ಕುಟುಂಬವು ಗುರುತಿಸಿತು. ಟೆಲಿಫೋನ್ ಬೂತಿನ ಮಾಲೀಕ ಮತ್ತು ಚಂದ್ರಕಾಂತ್ನ ಮನೆಯ ಮಾಲೀಕನ ಮೂಲಕ, ಕೊಲೆಯಾದವರೆಲ್ಲರೂ ಚಂದ್ರಕಾಂತನ ಮನೆಯಲ್ಲಿರುತ್ತಿದ್ದರೆಂದು ಸಾಬೀತಾಯಿತು. ಕೆಲವು ಚಾಕುಗಳ ಮೇಲಿದ್ದ ರಕ್ತದ ಕಲೆಗಳು ಎರಡು ದೇಹಗಳ ರಕ್ತಗಳಿಗೆ ಹೋಲಿಕೆಯಾದವು.
ಉಮೇಶ್, ಗುಡ್ಡು, ಅಮಿತ್, ಉಪೇಂದ್ರ ಮತ್ತು ದಿಲೀಪ್ ಈ ಐದು ಜನರ ಕೊಲೆಗಳ ಆರೋಪದ ಮೇಲೆ ಆರೋಪಪಟ್ಟಿಗಳನ್ನು ಸಲ್ಲಿಸಲಾಯಿತು. ದಿಲೀಪ್ ಹಾಗೂ ಗುಡ್ಡುವಿನ ಕೊಲೆ ಪ್ರಕರಣಗಳಲ್ಲಿ ಮೃತವ್ಯಕ್ತಿ ಯಾರೆಂದು ಪೊಲೀಸರು ಸಾಬೀತುಪಡಿಸಲು ಸಾಧ್ಯವಾಗಿಲ್ಲವೆಂದು ನ್ಯಾಯಾಧೀಶರು ಚಂದ್ರಕಾಂತ್ನನ್ನು ಬಿಡುಗಡೆ ಮಾಡಿದರು.
ಅಮಿತ್ ಹಾಗೂ ಉಪೇಂದ್ರನ ಕೊಲೆ ಪ್ರಕರಣಗಳಲ್ಲಿ ಚಂದ್ರಕಾಂತ್ಗೆ ಮರಣದಂಡನೆಯಾಗಿದ್ದಲ್ಲದೇ ಉಮೇಶ್ನ ಪ್ರಕರಣದಲ್ಲಿ ಆಜೀವ ಕಾರಾಗೃಹವಾಸದ ಶಿಕ್ಷೆಯಾಯಿತು. ಮರಣದಂಡನೆಯಾದ ಪ್ರಕರಣಗಳಲ್ಲಿ ಚಂದ್ರಕಾಂತ್ ಮೇಲ್ಮನವಿ ಸಲ್ಲಿಸಿದಾಗ ಉಚ್ಚ ನ್ಯಾಯಾಲಯವು ಅವನಿಗೆ ಜೀವಾವಧಿ ಶಿಕ್ಷೆಯನ್ನು ಕಾಯಂ ಮಾಡಿತು. ಚಂದ್ರಕಾಂತ್ ಝಾ ಈಗಲೂ ತಿಹಾರ್ ಜೈಲಿನಲ್ಲಿದ್ದಾನೆ. ‘ಪ್ರತೀಕಾರವು ಸಣ್ಣ ಹಾಗೂ ಸಂಕುಚಿತ ಮನದ ದುರ್ಬಲ ತೃಪ್ತಿ’ಎಂದ ಎರಡನೇ ಶತಮಾನದ ರೋಮನ್ ಕವಿ ಜುವೆನಲ್ನ ಮಾತುಗಳಿಗೆ ಚಂದ್ರಕಾಂತನೇ ಸೂಕ್ತ ಉದಾಹರಣೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)