

ನ್ಯೂಯಾರ್ಕ್: ದಾಖಲೆಯ 24ನೇ ಗ್ರಾಂಡ್ ಸ್ಲಾಂ ಟ್ರೋಫಿ ಗೆಲುವಿನ ಕನಸು ಕಾಣುತ್ತಿರುವ ಅಮೆರಿಕದ ಟೆನಿಸ್ ತಾರೆ ಸೆರೇನಾ ವಿಲಿಯಮ್ಸ್ ಮುಂಬರುವ ಯುಎಸ್ ಓಪನ್‌ಗೆ ಪೂರ್ವಭಾವಿಯಾಗಿ ಅಭ್ಯಾಸ ಆರಂಭಿಸಿದ್ದಾರೆ. ಮನೆಯ ಆವರಣದಲ್ಲೇ ನೂತನ ಟೆನಿಸ್ ಕೋರ್ಟ್ ನಿರ್ಮಿಸಿಕೊಂಡಿರುವ 38 ವರ್ಷದ ಸೆರೇನಾ ವಿಲಿಯಮ್ಸ್‌ಗೆ 2 ವರ್ಷದ ಪುತ್ರಿ ಅಲೆಕ್ಸಿಸ್ ಒಲಿಂಪಿಯಾ ಅಭ್ಯಾಸಕ್ಕೆ ಜತೆಗಾರ್ತಿಯಾಗಿದ್ದಾಳೆ!
ಅಲೆಕ್ಸಿಸ್ ಒಲಿಂಪಿಯಾ ಟೆನಿಸ್ ಕೋರ್ಟ್‌ನಲ್ಲಿ ಪುಟ್ಟ ರ‌್ಯಾಕೆಟ್ ಹಿಡಿದು ಅಮ್ಮನಂತೆಯೇ ಪೋಸ್ ನೀಡಿದ್ದಾಳೆ. ಅಮ್ಮ ಸರ್ವ್ ಎದುರಿಸಲು ಸಿದ್ಧವಾಗುವುದನ್ನು ಒಲಿಂಪಿಯಾ ಕೂಡ ಅನುಕರಣೆ ಮಾಡಿದ್ದಾಳೆ. ಮಗಳೊಂದಿಗೆ ಅಭ್ಯಾಸಕ್ಕೆ ಮರಳಿರುವ ಚಿತ್ರ ಮತ್ತು ವಿಡಿಯೋವನ್ನು 23 ಗ್ರಾಂಡ್ ಸ್ಲಾಂಗಳ ಒಡತಿ ಸೆರೇನಾ ಇನ್‌ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸೆರೇನಾರ ಅಕ್ಕ ವೀನಸ್ ವಿಲಿಯಮ್ಸ್, ‘ನಾನು ಅವಳನ್ನು ಪ್ರೀತಿಸುತ್ತೇನೆ. ನಿನ್ನನ್ನೂ ಪ್ರೀತಿಸುತ್ತೇನೆ. ಇದಕ್ಕಿಂತ ಕ್ಯೂಟ್ ಆಗಿರುವುದು ಸಿಕ್ಕರೆ ನಾನು ಬದುಕಿರುವುದಿಲ್ಲ’ ಎಂದು ಬರೆದಿದ್ದಾರೆ.
ಇದನ್ನೂ ಓದಿ: ಸೆರೇನಾ ವಿಲಿಯಮ್ಸ್ ಮನೆಯಲ್ಲೇ ಟೆನಿಸ್ ಕೋರ್ಟ್ ನಿರ್ಮಾಣ!
ಮಾಜಿ ವಿಶ್ವ ನಂ. 1 ಆಟಗಾರ್ತಿ ಸೆರೇನಾ ವಿಲಿಯಮ್ಸ್ ಯುಎಸ್ ಓಪನ್ ಸಿದ್ಧತೆಯ ಅಂಗವಾಗಿ ಮನೆಯ ಆವರಣದಲ್ಲೇ ಟೆನಿಸ್ ಕೋರ್ಟ್ ನಿರ್ಮಿಸಿಕೊಂಡಿದ್ದಾರೆ. ಯುಎಸ್ ಓಪನ್‌ನಲ್ಲಿ ಬಳಸಲಾಗುವ ಟರ್‌ನಲ್ಲೇ ಈ ಕೋರ್ಟ್ ನಿರ್ಮಿಸಲಾಗಿದೆ. ಸೆರೇನಾ ವಿಲಿಯಮ್ಸ್ 23 ಸಿಂಗಲ್ಸ್, 14 ಡಬಲ್ಸ್ ಮತ್ತು 2 ಮಿಶ್ರ ಡಬಲ್ಸ್ ಸಹಿತ ಒಟ್ಟು 39 ಗ್ರಾಂಡ್ ಸ್ಲಾಂ ಪ್ರಶಸ್ತಿಗಳ ಒಡತಿಯಾಗಿದ್ದಾರೆ.
ಸೆರೇನಾ ಪುತ್ರಿಯೂ ಗ್ರಾಂಡ್ ಸ್ಲಾಂ ಚಾಂಪಿಯನ್!
ಸೆರೇನಾ ವಿಲಿಯಮ್ಸ್ ಕೊನೆಯದಾಗಿ 2017ರ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು. ಆಗ ಅವರು 8 ವಾರಗಳ ಗರ್ಭಿಣಿಯಾಗಿದ್ದರು. ಹೀಗಾಗಿ ಸೆರೇನಾ ಮಗಳೊಂದಿಗೆ ಇರುವ ಚಿತ್ರವನ್ನು ಟ್ವೀಟಿಸಿರುವ ಆಸ್ಟ್ರೇಲಿಯನ್ ಓಪನ್‌ನ ಟ್ವಿಟರ್ ಖಾತೆಯಲ್ಲಿ ‘2017ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ಸ್’ ಎಂದು ಅಡಿಬರಹ ನೀಡಲಾಗಿದೆ. ಒಲಿಂಪಿಯಾ 2017ರ ಸೆಪ್ಟೆಂಬರ್ 1ರಂದು ಜನಿಸಿದ್ದರು. ಹುಟ್ಟುವಾಗಲೇ ‘ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಚಾಂಪಿಯನ್’ ಎನಿಸಿದ್ದರು! ಇದೀಗ ಮುಂದೆ ಅಮ್ಮನ ಹಾದಿಯಲ್ಲೇ ನಡೆದು ಟೆನಿಸ್ ತಾರೆಯಾಗಿ ಬೆಳೆಯುವ ನಿರೀಕ್ಷೆಯನ್ನೂ ಹುಟ್ಟಿಸಿದ್ದಾರೆ.