1 ಲಕ್ಷ ಅಂಕ ತಲುಪಬಹುದು ಷೇರು ಸೂಚ್ಯಂಕ: ಸ್ಟಾಕ್​ ಮಾರ್ಕೆಟ್​ ಉತ್ಕರ್ಷದಿಂದ ಜನಸಾಮಾನ್ಯರ ಮೇಲೆ ಪರಿಣಾಮವೇನು?

stock-3
Published on

ಮುಂಬೈ: ವಿಶ್ವದ ಷೇರುಪೇಟೆಗಳಲ್ಲಿ ಭಾರತೀಯ ಷೇರು ಮಾರುಕಟ್ಟೆಯ ಪ್ರಾಬಲ್ಯ ಹೆಚ್ಚುತ್ತಿದೆ. ಬಿಎಸ್​ಇ-ನಿಫ್ಟಿ ಸೂಚ್ಯಂಕಗಳು ಆಗಸಕ್ಕೆ ನೆಗೆಯುತ್ತಿವೆ. ಬಿಎಸ್ಇ ಸೂಚ್ಯಂಕ ಒಂದು ಲಕ್ಷ ತಲುಪುವ ಮುನ್ಸೂಚನೆಯೂ ಶುರುವಾಗಿದೆ. ಮುಂದಿನ ಐದು ವರ್ಷಗಳಲ್ಲಿ ಸೆನ್ಸೆಕ್ಸ್ ಒಂದು ಲಕ್ಷದ ಮಟ್ಟವನ್ನು ಮುಟ್ಟಬಹುದು ಎಂದು ಪ್ರಮುಖ ಹೂಡಿಕೆ ಕಂಪನಿ ಮೊಬಿಯಸ್ ಎಮರ್ಜಿಂಗ್ ಆಪರ್ಚುನಿಟೀಸ್ ಫಂಡ್‌ನ ಅಧ್ಯಕ್ಷ ಮಾರ್ಕ್ ಮೊಬಿಯಸ್ ಹೇಳುತ್ತಾರೆ.

ಭಾರತೀಯ ಷೇರು ಮಾರುಕಟ್ಟೆಯ ಬಗ್ಗೆ ಮೊಬಿಯಸ್​ ತುಂಬಾ ಸಕಾರಾತ್ಮಕವಾಗಿದ್ದಾರೆ. ಹೆಚ್ಚಿನ ಬಂಡವಾಳದ ಒಳಹರಿವನ್ನು ಆಕರ್ಷಿಸಲು ಭಾರತೀಯ ಮಾರುಕಟ್ಟೆಯ ಗಾತ್ರವನ್ನು ಹೆಚ್ಚಿಸಬೇಕಾಗಿದೆ ಎಂದು ಅವರು ಹೇಳುತ್ತಾರೆ.

ಮಾರುಕಟ್ಟೆ ವಿಶ್ಲೇಷಕರ ಪ್ರಕಾರ, ಬಿಎಸ್​ಇ ಮತ್ತು ನಿಫ್ಟಿ ಸೂಚ್ಯಂಕವು ದಾಖಲೆಯ ಗರಿಷ್ಠ ಮಟ್ಟ ಮುಟ್ಟಿದ ನಂತರ ಲಾಭದ ಬುಕಿಂಗ್ ಕಂಡುಬರಬಹುದು (ಅಂದರೆ, ಲಾಭಕ್ಕಾಗಿ ಷೇರುಗಳ ಮಾರಾಟ). ಅನೇಕ ಷೇರುಗಳ ಮೌಲ್ಯಮಾಪನಗಳು ಹೆಚ್ಚಿನ ಮಟ್ಟವನ್ನು ತಲುಪಿವೆ, ಇವುಗಳಲ್ಲಿ ಭಾರೀ ಏರಿಳಿತವಾಗಬಹುದು. ಇಂತಹ ಪರಿಸ್ಥಿತಿಯಲ್ಲಿ, ಮಾರುಕಟ್ಟೆಯಲ್ಲಿ ಸ್ವಲ್ಪ ಕುಸಿತವನ್ನು ಸಹ ಕಾಣಬಹುದು. ಇದಲ್ಲದೆ, ಹೂಡಿಕೆದಾರರು ಕಂಪನಿಗಳ ಬಲವಾದ ಗಳಿಕೆಯ ಬೆಳವಣಿಗೆಯತ್ತ ಗಮನ ಹರಿಸುತ್ತಿದ್ದಾರೆ.

ತ್ರೈಮಾಸಿಕ ಫಲಿತಾಂಶಗಳು ನಿರೀಕ್ಷೆಗೆ ತಕ್ಕಂತೆ ಇಲ್ಲದಿದ್ದರೆ ಮಾರುಕಟ್ಟೆ ಕುಸಿಯಬಹುದು. ಇದಲ್ಲದೆ, ಮುಂಬರುವ ದಿನಗಳಲ್ಲಿ ಮಾರುಕಟ್ಟೆಯ ಚಲನೆಯು ಬ್ಯಾಂಕ್​ ಬಡ್ಡಿ ದರ ಕುರಿತಂತೆ ಅಮೆರಿಕದ ಫೆಡರಲ್ ರಿಸರ್ವ್‌ನ ನಿಲುವು, ಜಾಗತಿಕ ಭೌಗೋಳಿಕ ರಾಜಕೀಯ ಸಮೀಕರಣಗಳು ಮತ್ತು ಅನೇಕ ದೇಶಗಳಲ್ಲಿನ ಚುನಾವಣೆಗಳ ಮೇಲೆ ಅವಲಂಬಿತವಾಗಿರುತ್ತದೆ.

ಜನರ ಮೇಲೆ ಪರಿಣಾಮ:

ಮಾರುಕಟ್ಟೆಯ ಉತ್ಕರ್ಷದಿಂದಾಗಿ ಉದ್ಯೋಗಾವಕಾಶಗಳು ಹೆಚ್ಚಾಗುತ್ತವೆ, ಜಿಡಿಪಿ ವೇಗವನ್ನು ಪಡೆಯುತ್ತದೆ, ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ.

ನೌಕರರ ಭವಿಷ್ಯ ನಿಧಿ ಸಂಘವು (EPFO) ​​ತನ್ನ ವಾರ್ಷಿಕ ಕಾರ್ಪಸ್‌ನ 15 ಪ್ರತಿಶತವನ್ನು ಇಟಿಎಫ್‌ಗಳಲ್ಲಿ (ಷೇರುಗಳಲ್ಲಿ) ಹೂಡಿಕೆ ಮಾಡುತ್ತದೆ. ಮಾರುಕಟ್ಟೆ ಏರಿದಾಗ ಸಂಸ್ಥೆಯ ನಿಧಿಯೂ ಹೆಚ್ಚುತ್ತದೆ. ಪಿಎಫ್ ಮೇಲಿನ ಬಡ್ಡಿ ದರವೂ ಇದನ್ನು ಅವಲಂಬಿಸಿರುತ್ತದೆ.

ಎನ್‌ಪಿಎಸ್ (ನೂತನ ಪಿಂಚಣಿ ಯೋಜನೆ) ಪಿಂಚಣಿ ಯೋಜನೆಯು ಷೇರು ಮಾರುಕಟ್ಟೆಗೆ ಸಹ ಲಿಂಕ್ ಆಗಿದೆ. ಷೇರು ಮಾರುಕಟ್ಟೆ ಏರಿಕೆಯಾದಷ್ಟು ಖಾತೆದಾರರು ಹೆಚ್ಚಿನ ಆದಾಯವನ್ನು ಪಡೆಯುತ್ತಾರೆ.

ವಯಸ್ಸಾದವರ ಮೇಲೆಯೂ ಪರಿಣಾಮ ಬೀರುತ್ತದೆ. ಅನೇಕ ಪಿಂಚಣಿದಾರರು ಪಿಂಚಣಿ ವರ್ಷಾಶನ ಯೋಜನೆಗಳನ್ನು ತೆಗೆದುಕೊಂಡಿದ್ದಾರೆ. ಈ ಯೋಜನೆಗಳ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲಾಗಿರುತ್ತದೆ. ಬೂಮ್ ಇದ್ದಾಗ ವರ್ಷಾಶನ ನಿಧಿ ಹೆಚ್ಚಾಗುತ್ತದೆ. ಹೆಚ್ಚಿನ ಪಿಂಚಣಿ ಸಿಗುತ್ತದೆ.

ಯುವಕರ ಮೇಲೆಯೂ ಪರಿಣಾಮ ಬೀರುತ್ತದೆ. ಅಂದಾಜು 7,500 ಕಂಪನಿಗಳು ಷೇರು ಮಾರುಕಟ್ಟೆಗಳೊಂದಿಗೆ ಸಂಬಂಧ ಹೊಂದಿವೆ. ತಮ್ಮ ಬಂಡವಾಳೀಕರಣ ಹೆಚ್ಚಾದಾಗ ಕಂಪನಿಗಳು ವಿಸ್ತರಿಸುತ್ತವೆ. ಇದು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.

ಹೀಗಿದೆ ಬಿಎಸ್​ಇ ಸೂಚ್ಯಂಕ ಪಯಣ:

1000: ಜುಲೈ 1990

10,000 : 6 ಫೆಬ್ರವರಿ 2006

20,000: 29 ಅಕ್ಟೋಬರ್ 2007

30,000 : ಮಾರ್ಚ್ 4, 2015

40,000 : ಮೇ 23, 2019

50,000 : ಜನವರಿ 21, 2021

60,000 : 24 ಸೆಪ್ಟೆಂಬರ್ 2021

70,000 : 11 ಡಿಸೆಂಬರ್ 2023

75,000 : 09 ಏಪ್ರಿಲ್, 2024

ವಿಶ್ವದ ಅಗ್ರ ಮಾರುಕಟ್ಟೆಗಳಲ್ಲಿ ಭಾರತದ ಸ್ಥಾನ:

ಅಮೆರಿಕ: 54.75

ಚೀನಾ: 9.18

ಜಪಾನ್: 6.55

ಹಾಂಗ್ ಕಾಂಗ್: 4.88

ಭಾರತ: 4.56

ಫ್ರಾನ್ಸ್: 3.40

ಯುಕೆ: 3.09

ಕೆನಡಾ: 3.02

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net