ಹಿರಿಯ 'ಐಪಿಎಸ್' ಅಧಿಕಾರಿ ಆ*ತ್ಮಹತ್ಯೆ; ಪ್ರಭಾವಿಗಳ ಕಿರುಕುಳವೇ ಕಾರಣ ಎಂದು ಪತ್ನಿಯಿಂದ 'ಸಿಎಂಗೆ' ಪತ್ರ| Chandigarh

Georgia
Published on

ಚಂಡೀಗಢ: ಹರಿಯಾಣ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ವೈ.ಪೂರಣ್ ಕುಮಾರ್ ಅವರು ಮಂಗಳವಾರ ಚಂಡೀಗಢದಲ್ಲಿರುವ ತಮ್ಮ ನಿವಾಸದಲ್ಲಿ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ. ಇನ್ನೂ ಈ ಘಟನೆ ಸಂಬಂಧ ವೈ.ಪೂರಣ್ ಕುಮಾರ್ ಅವರ ಪತ್ನಿ ಅಮ್ನೀತ್ ಪಿ.ಕುಮಾರ್, ಇಂದು (ಅ.09) ಚಂಡೀಗಢದಲ್ಲಿ ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರಿಗೆ ಪತ್ರವನ್ನು ಹಸ್ತಾಂತರಿಸಿದ್ದು, ತಮ್ಮ ಪತಿಯ ಆತ್ಮಹತ್ಯೆ ಪತ್ರದಲ್ಲಿ ಹೆಸರಿಸಲಾದ ಆರೋಪಿಗಳನ್ನು ತಕ್ಷಣ ಬಂಧಿಸಿ, ಎಫ್‌ಐಆರ್ ದಾಖಲಿಸುವಂತೆ ಕೋರಿದ್ದಾರೆ.

ಪತಿಯ ಆತ್ಮಹತ್ಯೆ ಪತ್ರವನ್ನು ಉಲ್ಲೇಖಿಸಿ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಖಂಡನೀಯ ಹೇಳಿಕೆಗಳನ್ನು ನೀಡಿದ್ದು, ವಿವರವಾದ 8 ಪುಟಗಳ ಆತ್ಮಹತ್ಯೆ ಟಿಪ್ಪಣಿ ಮತ್ತು ಔಪಚಾರಿಕ ದೂರಿನ ಹೊರತಾಗಿಯೂ ಯಾವುದೇ ಎಫ್‌ಐಆರ್ ದಾಖಲಿಸಲಾಗಿಲ್ಲ ಎಂದು ಹೇಳಿದ್ದಾರೆ. ನನ್ನ ಪತಿ ಸಾವಿಗೆ ಹಿರಿಯ ಪ್ರಭಾವಿ ಅಧಿಕಾರಿಗಳ ಕಿರುಕುಳವೇ ಕಾರಣ ಎಂದು ಅವರು ಆರೋಪಿಸಿದ್ದಾರೆ. ಈ ಬಗ್ಗೆ ದೌರ್ಜನ್ಯ ತಡೆ ಕಾಯ್ದೆ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಅಡಿ ದೂರು ದಾಖಲಿಸಿ ಹರಿಯಾಣದ 13 ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ. ಹರಿಯಾಣ ಪೊಲೀಸ್ ಮತ್ತು ಆಡಳಿತದ ಪ್ರಭಾವಿ ಉನ್ನತ ಅಧಿಕಾರಿಗಳು ಪ್ರಕರಣದಲ್ಲಿ ಆರೋಪಿಗಳಾಗಿದ್ದು, ಅವರು ಚಂಡೀಗಢ ಪೊಲೀಸರ ಮೇಲೆ ಪ್ರಭಾವ ಬೀರುತ್ತಿರುವುದರಿಂದ ಯಾವುದೇ ಕ್ರಮ ಕೈಗೊಳ್ಳಲು ಆಗುತ್ತಿಲ್ಲ ಎಂದು ಪತ್ನಿ ಮುಖ್ಯಮಂತ್ರಿ ನಯಾಬ್ ಸಿಂಗ್ ಹೇಳಿದ್ದಾರೆ.

ಚಂಡೀಗಢದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಇಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವೈ.ಪೂರಣ್ ಕುಮಾರ್ ಅವರ ದುರಂತ ಸಾವಿನ ಬಳಿಕ ಹರಿಯಾಣ ಪೊಲೀಸ್ ಮತ್ತು ಆಡಳಿತ ವಲಯದಲ್ಲಿ ಆಘಾತದ ವಾತಾವರಣ ನಿರ್ಮಾಣವಾಗಿದೆ. 2001 ರ ಬ್ಯಾಚ್‌ನ ಹರಿಯಾಣ ಕೇಡರ್‌ನ ಐಪಿಎಸ್ ಅಧಿಕಾರಿ ಮತ್ತು ಎಡಿಜಿಪಿ ಶ್ರೇಣಿಯ ಅಧಿಕಾರಿಯಾಗಿದ್ದ ವೈ. ಪೂರಣ್ ಕುಮಾರ್, ಚಂಡೀಗಢದ ಸೆಕ್ಟರ್ 11 ರಲ್ಲಿರುವ ಅವರ ಮನೆ ಸಂಖ್ಯೆ 116 ರಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ ಆತ್ಮಹತ್ಯೆಗೆ ನಿಖರವಾದ ಕಾರಣವೇನೆಂದು ಎಂಬುದು ಇನ್ನೂ ತಿಳಿದು ಬಂದಿಲ್ಲ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net