

ಮಂಗಳೂರು: ಮನುಷ್ಯನ ದುರಾಸೆಗೆ ಪರಿಸರದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಲೇ ಇದೆ. ವಿಶ್ವ ಪರಿಸರ ದಿನದಂದು ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಕೈಗೊಂಡು ಕಾರ್ಯ ಪ್ರವೃತ್ತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಶೋಭಾ ಬಿ.ಜಿ. ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯ, ಮಂಗಳೂರು ವಿವಿ, ಕೈಗಾರಿಕಾ ಉದ್ದಿಮೆದಾರರು, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಸಹಯೋಗದಲ್ಲಿ ಎಸ್ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಬುಧವಾರ ವಿಶ್ವ ಪರಿಸರ ದಿನಾಚರಣೆ ಉದ್ಘಾಟಿಸಿ, ಅವರು ಮಾತನಾಡಿದರು.
ಭವಿಷ್ಯದ ಯೋಚನೆ ಬಿಟ್ಟು ಹಣ ಗಳಿಸುವ ಉದ್ದೇಶದಿಂದ ಪರಿಸರದ ಮೇಲೆ ನಾನಾ ರೀತಿಯಲ್ಲಿ ಹೊಡೆತ ಬೀಳುತ್ತಿದೆ. ಪರಿಣಾಮ ಹವಾಮಾನ ವೈಪರಿತ್ಯ, ಬರಗಾಲದಂತಹ ಸನ್ನಿವೇಶಗಳನ್ನು ಈಗಾಗಲೇ ಎದುರಿಸುತ್ತಿದ್ದೇವೆ. ಆದಷ್ಟು ನಮ್ಮಿದಾಂಗುವ ರೀತಿಯಲ್ಲಿ ಗಿಡ, ಮರಗಳನ್ನು ನೆಟ್ಟು ಬೆಳೆಸುವ ಮೂಲಕ ಪರಿಸರದ ಸೇವೆಯನ್ನು ಮಾಡಬೇಕಾಗಿದೆ ಎಂದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆ್ಯಂಟನಿ ಎಸ್.ಮರಿಯಪ್ಪ ಮುಖ್ಯ ಅತಿಥಿಯಾಗಿದ್ದರು. ಕಾಂಕ್ರೀಟಿಕರಣದಿಂದ ಅಂತರ್ಜಲ ವರ್ಷದಿಂದ ವರ್ಷಕ್ಕೆ ಬತ್ತುತ್ತಿದೆ. ಖಾಸಗಿ ಜಮೀನುಗಳಲ್ಲಿ ಮರಗಳನ್ನು ಬೆಳೆಸಿ ಹಸಿರು ಪರಿಸರ ರಕ್ಷಣೆಯ ಕಡೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಎಸ್ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ತಾರಾನಾಥ ಅಧ್ಯಕ್ಷತೆ ವಹಿಸಿದ್ದರು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಭಾಗೀಯ ಕಚೇರಿಯ ಹಿರಿಯ ಪರಿಸರ ಅಧಿಕಾರಿ ವಿಜಯಾ ಹೆಗಡೆ ಉಪಸ್ಥಿತರಿದ್ದರು. ಸುರತ್ಕಲ್ ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ರಾಜೇಂದ್ರ ಕಲ್ಬಾವಿ ವಿಶೇಷ ಪರಿಸರ ಉಪನ್ಯಾಸ ನೀಡಿದರು.
ಈ ಸಂದರ್ಭ ಸೆಣಬು, ಬಟ್ಟೆ ಚೀಲ ಹಾಗು ಗಿಡಗಳನ್ನು ವಿತರಿಸಲಾಯಿತು. ಪ್ರಬಂಧ, ಆಶುಭಾಷಣ ಮೊದಲಾದ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಉಪ ಪರಿಸರ ಅಧಿಕಾರಿ ಡಾ.ಮಂಜು ಅವರು ವಿಜೇತರ ಪಟ್ಟಿ ಚಾಚಿಸಿದರು.
ಉಪ ಪರಿಸರ ಅಧಿಕಾರಿ ಡಾ.ಮಹೇಶ್ವರಿ ಸಿಂಗ್ ಸ್ವಾಗತಿಸಿ, ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಡಾ.ತಾರಾನಾಥ ವಂದಿಸಿದರು. ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು. ಆರಂಭದಲ್ಲಿ ಪರಿಸರ ಜಾಥಾ ನಡೆಯಿತು.