

ಮಂಡ್ಯ: ಪ್ರಸ್ತುತ ಶ್ರೀಮಂತಿಕೆ, ಅಧಿಕಾರವನ್ನು ಪೂಜಿಸುತ್ತಿರುವುದರ ಪರಿಣಾಮ ಮಹಾತ್ಮ ಗಾಂಧೀಜಿ ಅವರ ಮೌಲ್ಯ ಮರೆಯಾಗುತ್ತಿವೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ವೂಡೇ ಪಿ.ಕೃಷ್ಣ ಬೇಸರ ವ್ಯಕ್ತಪಡಿಸಿದರು.
ನಗರದ ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಶತಮಾನೋತ್ಸವ ಭವನದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಮಂಡ್ಯ ವಿಶ್ವವಿದ್ಯಾಲಯ, ಪಟೇಲ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಆಯೋಜಿಸಿದ್ದ ಗಾಂಧೀಜಿ ಎಂಬ ವರ್ತಮಾನ ಎರಡು ದಿನದ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಗಾಂಧೀಜಿ ಅವರನ್ನು ಅವಹೇಳನ ಮಾಡುತ್ತಿರುವುದನ್ನು ಕಂಡು ಕಾಣದಂತಿರುವ ಅಧಿಕಾರಿಗಳೇ ನಿಜವಾದ ದೇಶ ದ್ರೋಹಿಗಳು ಎಂದು ಆಕ್ರೋಶಿಸಿದರು.
ಸಾಮಾಜಿಕ ಜಾಲತಾಣದ ಎಡಬಿಡಂಗಿಗಳಿಂದ ನಮ್ಮ ಯುವಕರ ಮೇಲೆ ಪರಿಣಾಮ ಬೀರುತ್ತಿವೆ. ಅದು ಸತ್ಯವೆಂಬುದನ್ನು ಒಪ್ಪಿಕೊಳ್ಳಲಾಗುತ್ತದೆ. ಆದರೆ ಅದನ್ನು ಪರೀಕ್ಷಿಸದೇ ಎಂದಿಗೂ ಒಪ್ಪಿಕೊಳ್ಳಬಾರದು. ನಮ್ಮ ಗಾಂಧೀಜಿ ಅವರ ಅವಹೇಳನ ಆಗುತ್ತಿದ್ದರೂ ಅದನ್ನು ಏನಾದರೂ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿರುವ ಯಾವುದೇ ಅಧಿಕಾರಿಗಳು ನಿಜವಾದ ದೇಶ ದ್ರೋಹಿಗಳು. ಹಾಗಿದ್ದರೆ ಅದನ್ನು ಸುಮ್ಮನಿದ್ದೇ ಒಪ್ಪಿಕೊಂಡಿದ್ದಾರಾ ಎಂದು ಕಿಡಿಕಾರಿದರು.
ಗಾಂಧೀಜಿ ಅವರು ಬರುತ್ತಾರೆ ಎಂದು ದೇಶದ ಜನವೇ ಸೇರುತ್ತಿತ್ತು. ಅದೇ ರೀತಿ ಅವರು ಸಾರ್ವಜನಿಕ ಜೀವನವನ್ನು ಅಧ್ಯಾತ್ಮಿಕರಿಸಿ ಎಲ್ಲ ಧರ್ಮೀಯರನ್ನು ಒಟ್ಟಿಗೆ ತೆಗೆದುಕೊಂಡು ಹೋದರು. ಎಲ್ಲರನ್ನೂ ಒಗ್ಗಟ್ಟಿನ ಶಕ್ತಿ ಜತೆಗೆ ಕರೆದುಕೊಂಡು ಹೋದ ರಾಷ್ಟ್ರದಲ್ಲಿ ಯಾರಾದರು ಇದ್ದರೆ, ಅದು ಏಕೈಕ ಮಹಾತ್ಮ ಗಾಂಧೀಜಿ ಆಗಿದ್ದಾರೆ. 142 ಉಪವಾಸ ಮಾಡಿ 2,023 ದಿವಸ ಜೈಲು ವಾಸ ಅನುಭವಿಸುತ್ತಾರೆ. ಏಕೆಂದರೆ ಸತ್ಯ ಮತ್ತು ಅಹಿಂಸೆಯನ್ನು ಜನರಲ್ಲಿ ತಿದ್ದು ಸಲುವಾಗಿ ಇವೆಲ್ಲವನ್ನು ಮಾಡಿ ಗೆಲ್ಲುತ್ತಾರೆ ಎಂದು ಸ್ಮರಿಸಿದರು.
ಬಡವರು ಬಡವಾರಾಗಿಯೇ ಹಾಗೂ ಶ್ರೀಮಂತರು ಶ್ರೀಮಂತರಾಗಿಯೇ ಇರುವುದನ್ನು ಮೊದಲು ತೊಲಗಿಸಲು ಯೋಜನೆಗಳು ರೂಪುಗೊಳ್ಳಬೇಕು. ಜಾತಿ ಸಂಘರ್ಷ ಸಂಪೂರ್ಣವಾಗಿ ಕೊನೆಗೊಳ್ಳಬೇಕು. ಪ್ರಸ್ತುತದಲ್ಲಿ ಅವಶ್ಯವಾಗಿ ಭ್ರಷ್ಟಾಚಾರ ಮುಕ್ತ ದೇಶ ಮತ್ತು ಪ್ರಾಮಾಣಿಕ ಆಡಳಿತ ಬೇಕಿದೆ. ಇದನ್ನು ಯುವ ಜನತೆಯಲ್ಲಿ ಬಿತ್ತುವ ಕೆಲಸವನ್ನು ಮಾಡಬೇಕು. ಕೌಶಲ ಹಾಗೂ ಹೃದಯದ ಶಿಕ್ಷಣ ಸಿಗಬೇಕೆಂದು ಗಾಂಧೀಜಿ ಅವರು ಹೇಳಿದ್ದರು. ಆದರೆ ಅದನ್ನು ದೂರವಿಟ್ಟು ಪಾಶ್ಚಿಮಾತ್ತಕ್ಕೆ ಒಗ್ಗಿಕೊಂಡಿರುವುದು ಬೇಸರ ತರಿಸಿದೆ ಎಂದು ವಿಷಾದಿಸಿದರು.
ಮಾತೃಭಾಷೆಯಲ್ಲಿ ಪರಿಣಿತಿ ಪಡೆಯಬೇಕೆನ್ನುವ ನಿಟ್ಟಿನಲ್ಲಿ ಆ ಸ್ಥಳೀಯ ಪ್ರಾಂತೀಯ ಭಾಷೆಯಲ್ಲಿ ರಚನಾತ್ಮಕ ಕಾರ್ಯಕ್ರಮಗಳನ್ನು ನೀಡಬೇಕೆಂದು ಗಾಂಧೀಜಿ ಅವರು ಹೇಳಿದ್ದರು. ಈ ಸಂಕಿರಣದ ಮೂಲಕ ಕರ್ನಾಟಕ ಸಂಘದ ತೊಡಗಿರುವುದು ಮೆಚ್ಚುವ ಕೆಲಸವಾಗಿದೆ. ಬಹುಜನ ಹಿತಾಯ ಬಹುಜನ ಸುಖಾಯವನ್ನು ಅವರ ಒಪ್ಪದೇ ಸರ್ವಜನ ಹಿತಾಯ ಸರ್ವಜನ ಸುಖಾಯ ಎಂಬುದನ್ನು ಒಪ್ಪಿದ ಗಾಂಧಿ ಅವರು ಇಂದಿಗೂ ಪ್ರಸ್ತುತವಾಗಿ ನಿಲ್ಲುತ್ತಾರೆ ಎಂದು ವ್ಯಾಖ್ಯಾನಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಮಾತನಾಡಿ, ಗಾಂಧೀಜಿ ಅವರನ್ನು ಒಪ್ಪಿಕೊಂಡರಷ್ಟೇ ಬದುಕು ಅಥವಾ ಭವಿಷ್ಯ. ಗಾಂಧೀಜಿ ಮತ್ತು ಅಂಬೇಡ್ಕರ್ ಅವರನ್ನು ಒಟ್ಟಿಗೆ ನಿಲ್ಲಿಸಿ ಚರ್ಚೆ ನಡೆಸುವ ಅಗತ್ಯವಿಲ್ಲ. ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್ ಅವರದಾದರೆ, ಸ್ವಾತಂತ್ರ್ಯ ತಂದುಕೊಟ್ಟ ಗಾಂಧೀಜಿ ಅವರನ್ನು ತುಲನೆ ಮಾಡಿ ನೋಡಬಾರದು. ಶಾಂತಿ ಧೂತ ಅಹಿಂಸಾ ಪರಿಚಾರಕ ಗಾಂಧಿ ಅವರು ಮಹಾತ್ಮರಾದರು ಎಂದು ಬಣ್ಣಿಸಿದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ ಮಾತನಾಡಿ, ಧಾರಣ ಶಕ್ತಿ ಇದ್ದವರು ಮಾತ್ರ ಗಾಂಧಿ ತರಹ ಸರಳ ಜೀವನ ನಡೆಸಲು ಹಾಗೂ ಅವರ ಅನುಕರಣೆ ಸಾಧ್ಯವಾಗುತ್ತದೆ. ಏಕೆಂದರೆ ಸುಮ್ಮನೆ ಇದ್ದು ದಿಢೀರನೇ ಪಂಚೆ ಧರಿಸಿ ಕೋಲು ಹಿಡಿದು ನಡೆದರೆ ಹುಚ್ಚ ಎಂಬ ಪಟ್ಟ ಕಟ್ಟುತ್ತಾರೆ. ಗಾಂಧೀಜಿ ಕುರಿತು ಈಗಾಗಲೇ ಎರಡು ವಿಚಾರ ಸಂಕಿರಣ ನಡೆಸಿರುವುದರಿಂದ ಗಾಂಧಿ ವಿಚಾರವನ್ನ ಜನರ ಬಳಿ ಹೇಗೆ ತೆಗೆದುಕೊಂಡು ಹೋಗಬೇಕೆನ್ನುವುದು ಸಹಕಾರಿಯಾಗಿದೆ. ಆದರೆ ಗಾಂಧಿ ವಿಚಾರವನ್ನು ಬಲವಂತವಾಗಿಯಾದರೂ ವಿದ್ಯಾರ್ಥಿಗಳಿಗೆ ತಿಳಿಸುವ ಕೆಲಸ ಮಾಡಬೇಕಿದೆ ಇಲ್ಲವಾದರೆ ಗಾಂಧಿ ಒಂಟಿ ಆಗುತ್ತಾರೆ ಎಂದು ಆತಂಕ ಪಟ್ಟರು.
ಇದಕ್ಕೂ ಮುನ್ನ ನಡೆದ ವಿಚಾರಗೋಷ್ಠಿಯಲ್ಲಿ ‘ಗಾಂಧೀಜಿ ಅವರ ಕನಸಿನ ಭಾರತ ಮತ್ತು ವರ್ತಮಾನ’ ಕುರಿತು ಗೌರಿಬಿದನೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ರಮೇಶ್‌ಚಂದ್ರ ದತ್ತ, ಗಾಂಧೀಜಿ: ಓದು ಮತ್ತು ಬರಹಗಳು ಕುರಿತು ನಿವೃತ್ತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ, ಗಾಂಧೀಜಿ ಮತ್ತು ಅಹಿಂಸೆ ಬಗ್ಗೆ ಬೆಂಗಳೂರಿನ ನಿವೃತ್ತ ಪ್ರಾಧ್ಯಾಪಕ ಮುರಳೀಧರ್, ಗಾಂಧೀಜಿ ಮತ್ತು ತಾಯ್ತನದ ಬಗ್ಗೆ ಕವಯತ್ರಿ ಶುಭಶ್ರೀ, ಗಾಂಧೀಜಿ ನಾವೇಕೆ ತಿಳಿಯಬೇಕು? ಕುರಿತಂತೆ ಬೆಂಗಳೂರು ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಅವರು ವಿಷಯ ಮಂಡಿಸಿದರು. ಗಾಂಧಿ ಚಿಂತಕ ಮಾದೇಗೌಡ, ಪ್ರೊ.ಕೆಂಪಮ್ಮ ಇದ್ದರು.