ಸ್ವಯಂ ಉದ್ಯೋಗಕ್ಕೆ ವಿಪುಲ ಅವಕಾಶ...

UDP-5-1-MP Kota
Published on

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ

ಪಿಎಂಎಫ್ಎಂಇ ಯೋಜನೆಯಡಿ ಶೇ.50 ಸಹಾಯಧನ

ವಿಜಯವಾಣಿ ಸುದ್ದಿಜಾಲ ಉಡುಪಿ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಘಟಕ ಯೋಜನೆ(ಪಿಎಂಎಫ್ಎಂಇ)ಯ ಮೂಲಕ ಶೇ. 50 ಸಹಾಯಧನ ಪಡೆದು ಸ್ವಯಂ ಉದ್ಯೋಗ ಕೈಗೊಳ್ಳಲು ವಿಪುಲ ಅವಕಾಶವಿದೆ. 2025&-26ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯಲ್ಲಿ 250 ಹೊಸ ಮತ್ತು ಚಾಲ್ತಿಯಲ್ಲಿರುವ ಆಹಾರ ಸಂಸ್ಕರಣಾ ಘಟಕಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾಹಿತಿ ನೀಡಿದ್ದಾರೆ.

Food 2
ಯೋಜನೆಯಡಿ ಬಾಡಿಗೆ/ಲೀಸ್​ಗೆ ಮತ್ತು ಸ್ವಂತ ಕಟ್ಟಡ, ಅಂಗಡಿ, ಕೋಣೆಗಳಲ್ಲಿ ಕಿರು ಉದ್ಯಮ ಸ್ಥಾಪಿಸಬಹುದಾಗಿದೆ. 18 ವರ್ಷ ಮೇಲ್ಪಟ್ಟ ಮಹಿಳೆಯರು, ಪುರುಷರು ಹಾಗೂ ಸ್ವ-ಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು ಕೋ-ಆಪರೇಟಿವ್​ ಸೊಸೈಟಿಗಳು, ಖಾಸಗಿ ಮಾಲೀಕತ್ವದ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.

ಯೋಜನೆಯ ವಿಶಿಷ್ಟತೆ

ಪಿಎಂಎಫ್ಎಂಇ ಯೋಜನೆಯ ವಿಶಿಷ್ಟತೆಯೇನೆಂದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಶೇ.50ರಷ್ಟು ಸಹಾಯಧನ (ಗರಿಷ್ಠ 15 ಲಕ್ಷ ರೂ. ಮಿತಿ) ನೀಡಲಾಗುವುದು. ಈಗಾಗಲೇ ಇದೇ ಯೋಜನೆಯಡಿ ಸಬ್ಸಿಡಿ ಸೌಲಭ್ಯ ಪಡೆದವರಿಗೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಜಿಲ್ಲೆಯಲಿ 2024&-25ನೇ ಸಾಲಿನಲ್ಲಿ 340ಕ್ಕೂ ಅಧಿಕ ಕಿರು ಘಟಕ ಸ್ಥಾಪನೆಯಾಗಿವೆ.

ಸ್ವಯಂ ಉದ್ಯೋಗದಲ್ಲಿ ಆಸಕ್ತಿ ಇರುವವರು ಉಡುಪಿ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸೂರಜ ಶೆಟ್ಟಿ (9019075051) ಅವರನ್ನು ಸಂಪರ್ಕಿಸಬಹುದು ಎಂದು ಸಂಸದ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಂಸ್ಕರಿಸಬಹುದಾದ, ಮೌಲ್ಯವರ್ಧಿತ ಆಹಾರ ಘಟಕ

Food
ಯೋಜನೆಯಡಿ ಮೀನಿನ ಮೌಲ್ಯವರ್ಧಿತ ಪದಾರ್ಥ, ಹಿಟ್ಟಿನ ಗಿರಣಿ, ಪ್ಯಾಕಿಂಗ್​ ಮಷಿನ್​, ಎಣ್ಣೆ ಗಾಣ, ಬೇಕರಿ ಉತ್ಪನ್ನ, ಅರಿಶಿಣ ಸಂಸ್ಕರಣೆ, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ ತಯಾರಿಕೆ, ನಿಪ್ಪಟ್ಟು, ಪಾನಿಪುರಿ, ಕೋಡ್ಬಳೆ, ಚಿಪ್ಸ್​ ತಯಾರಿಕೆ, ಸಂಸ್ಕರಿಸಿದ ಚಪಾತಿ, ಪರೋಟ, ಪೂರಿ, ಹೋಳಿಗೆ ಉತ್ಪನ್ನಗಳ ತಯಾರಿಕೆ, ಮಸಾಲಾ-ಸಾಂಬಾರ ಉತ್ಪನ್ನಗಳು, ಹಾಲಿನ ಉತ್ಪನ್ನ, ಸಿಹಿ-ಖಾರಾ ತಿಂಡಿ, ಬೆಲ್ಲ ಮತ್ತು ಮಿಠಾಯಿ ತಯಾರಿಕೆ, ಕಾಫಿ-ಟೀ ಪುಡಿ ಸಂಸ್ಕರಣಾ ಘಟಕ, ಚಾಕೊಲೇಟ್​ ಘಟಕ, ಜೇನು ಸಂಸ್ಕರಣೆ, ಸಿರಿಧಾನ್ಯಗಳ ಉಪ ಉತ್ಪನ್ನ, ಡ್ರೈ ಫ್ರೂಟ್ಸ್ ಸಂಸ್ಕರಣೆ, ಐಸ್​ ಕ್ರೀಂ ತಯಾರಿಕೆ, ಹಸಿಮೆಣಸಿನಕಾಯಿ ಮತ್ತು ಟೊಮ್ಯಾಟೋ ಪೇಸ್ಟ್​ ಮತ್ತು ಸಾಸ್​ ತಯಾರಿಕೆ, ಶಾವಿಗೆ, ರವಾ ನೂಡಲ್ಸ್​ ತಯಾರಿಕೆ, ಕೋಳಿ ಮತ್ತು ಕೋಳಿ ಮಾಂಸ ಸಂಸ್ಕರಣಾ ಘಟಕ, ಪಶು ಮತ್ತು ಮೀನಿನ ಆಹಾರ, ಮನುಷ್ಯರು ಮತ್ತು ಪ್ರಾಣಿಗಳು ಸೇವಿಸುವ ಹಾಗೂ ಸಂಸ್ಕರಿಸಬಹುದಾದ ಎಲ್ಲ ಆಹಾರ ಪದಾರ್ಥಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net