ಕರ್ಮ ಮಾರ್ಗದಿಂದ ಭಗವಂತನ ದರ್ಶನ

byn-1
Published on

ವಿಜಯವಾಣಿ ಸುದ್ದಿಜಾಲ ಬೈಂದೂರು

ಭಕ್ತಿ, ಜ್ಞಾನ, ಕರ್ಮ ಮಾರ್ಗಗಳಿಂದ ಭಗವಂತನನ್ನು ಕಾಣಬಹುದಾಗಿದ್ದು, ಪ್ರತಿಯೊಂದರಲ್ಲೂ ಮನುಷ್ಯ ಇತಿಮಿತಿಗಳ ಅಳವಡಿಸಿಕೊಳ್ಳಬೇಕು ಎಂದು ಸಿದ್ದಾಪುರ ನೆಲಮಾವು ಶ್ರೀಮನ್ನೆಲೆ ಮಾವಿನಮಠದ ಪೀಠಾಧಿಪತಿ ಶ್ರೀ ಮಾಧವಾನಂದ ಭಾರತಿ ಶ್ರೀಗಳು ಹೇಳಿದರು.

ಬೈಂದೂರು ಗ್ರಾಮದ ಕೊರಾಡಿ ಶ್ರೀ ವನದುರ್ಗಾಪರಮೇಶ್ವರಿ ದೇವಸ್ಥಾನದ ಪುನಃಪ್ರತಿಷ್ಠಾಪನೆ, ಅಷ್ಟಬಂಧ ಹಾಗೂ ಬ್ರಹ್ಮಕಲಶೋತ್ಸವ ಪ್ರಯುಕ್ತ ಶನಿವಾರ ನಡೆದ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ನಮ್ಮ ಉತ್ತಮ ಕಾರ್ಯಗಳಿಗೆ ದೈವ ಪ್ರೇರಣೆ ಬಲ ನೀಡುತ್ತದೆ. ಧಾರ್ಮಿಕ ನಂಬಿಕೆಗಳು ಮನುಷ್ಯನ ದೇಹಕ್ಕೆ ಚೈತನ್ಯ ಹಾಗೂ ಮನಸ್ಸಿಗೆ ಶಾಂತಿ ನೀಡುತ್ತದೆ. ಪರಂಪರಾನುಗತವಾಗಿ ಬಂದ ಧರ್ಮ ಸೂಕ್ಷ್ಮಗಳು ಮತ್ತು ಸಂಸ್ಕಾರವನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸಬೇಕು ಎಂದರು.

ಹರೇಗೋಡು ಮಂಜುನಾಥ ಭಟ್ಟ ಧಾರ್ಮಿಕ ಉಪನ್ಯಾಸ ನೀಡಿದರು. ಸಾಧಕರನ್ನು ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನಿಸಲಾಯಿತು.

ದೇವಳದ ಆಡಳಿತ ಮೊಕ್ತೇಸರ ನಂದಕಿಶೋರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿದ್ದರು. ವತ್ತಿನಕಟ್ಟೆ ದೇವಳದ ಪ್ರಧಾನ ಅರ್ಚಕ ಕೃಷ್ಣಮೂರ್ತಿ ನಾವಡ, ನಾಯ್ಕನಕಟ್ಟೆ ಪ್ರಾರ್ಥನಾ ಮಂದಿರದ ಗಣೇಶ ಚಂದ್ರಕಾಂತ ಪೈ, ಉದ್ಯಮಿಗಳಾದ ಕೃಷ್ಣ ದೇವಾಡಿಗ, ಬಿಜೂರು ವೆಂಕಟ್ರಮಣ ಶೇರುಗಾರ್, ಶಿವಾನಂದ ಮಂಜುನಾಥ ಮದ್ದೋಡಿ, ದೇವಳದ ಮಾಜಿ ಅಧ್ಯಕ್ಷರಾದ ಚಂದ್ರ ದೇವಾಡಿಗ, ನಾರಾಯಣ ಮರಾಠಿ ನಾಗರಮಕ್ಕಿ ಇದ್ದರು. ನಿತ್ಯಾನಂದ ದೇವಾಡಿಗ ಸ್ವಾಗತಿಸಿದರು. ಸುಧಾಕರ ಪಿ.ವಂದಿಸಿದರು. ಆನಂದ ಮದ್ದೋಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net