ತರಕಾರಿಯ ವಿಷಕಾರಿ ಅಂಶದಿಂದ ಕ್ಯಾನ್ಸರ್ : ಶಾಸಕ ಹರೀಶ್ ಪೂಂಜ ಕಳವಳ

POONJA
Published on

ಬೆಳ್ತಂಗಡಿ: ಸುಭಾಷ್ ಯಾದವ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ನಮ್ಮ ತೋಟ ನಮ್ಮ ತರಕಾರಿ ಯೋಜನೆಯಡಿಯಲ್ಲಿ ಸಂಘದ ರೈತ ಸದಸ್ಯರಿಗೆ ತರಕಾರಿ ಬೀಜ ಉಚಿತ ವಿತರಣಾ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಶಾಸಕ ಹರೀಶ್ ಪೂಂಜ ತರಕಾರಿ ಬೀಜ ವಿತರಿಸಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಮ್ಮ ಜಿಲ್ಲೆಯಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತಿದೆ. ದಿನನಿತ್ಯ ತಿನ್ನುವ ವಿಷಕಾರಿ ಅಂಶದಿಂದ ಕೂಡಿದ ತರಕಾರಿಯಿಂದ ಸಣ್ಣ ಮಕ್ಕಳೂ ಕ್ಯಾನ್ಸರ್ ಮಾರಿಗೆ ಬಲಿಯಾಗುತ್ತಿದ್ದಾರೆ. ಹೀಗಾಗಿ ನಮ್ಮ ಸಂಘದ ರೈತ ಸದಸ್ಯರು ತಮ್ಮ ಮನೆಯಲ್ಲೇ ತರಕಾರಿ ಬೆಳೆದು ಅದನ್ನೇ ಸೇವಿಸಬೇಕೆಂಬ ಧೈಯ ನಮ್ಮದು. ಧರ್ಮಸ್ಥಳ ಸಹಕಾರ ಸಂಘ ರಾಜ್ಯದಲ್ಲಿಯೇ ಪ್ರಥಮವಾಗಿ ಈ ಯೋಜನೆ ಹಾಕಿದೆ ಎಂದರು.

ಸಂಘದ ಅಧ್ಯಕ್ಷ ಪ್ರೀತಮ್ ಡಿ. ಅಧ್ಯಕ್ಷತೆ ವಹಿಸಿದ್ದರು. ಧರ್ಮಸ್ಥಳ ಗ್ರಾಪಂ ಉಪಾಧ್ಯಕ್ಷ ಶ್ರೀನಿವಾಸ ರಾವ್, ರೂಪೇಶ್ ಮಲ್ಲರ್, ಸಂಘದ ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರಾದ ಉಮಾನಾಥ್, ಶೀನ, ಧನಲಕ್ಷ್ಮೀ ಜನಾರ್ದನ, ಪ್ರಸನ್ನ, ಚಂದ್ರಶೇಖರ್, ವಿಕ್ರಮ್ ಗೌಡ, ತಂಗಚ್ಚನ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಶಶಿಧರ್ ಉಪಸ್ಥಿತರಿದ್ದರು.

ನಿರ್ದೇಶಕ ನೀಲಕಂಠ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕಿ ಶಾಂಭವಿ ರೈ ವಂದಿಸಿದರು. ಎ.ಎಸ್.ಲೋಕೇಶ್ ಶೆಟ್ಟಿ ನಿರೂಪಿಸಿದರು. ಸಿಬ್ಬಂದಿ ಸಹಕರಿಸಿದರು. 500ಕ್ಕಿಂತ ಹೆಚ್ಚು ಸದಸ್ಯರಿಗೆ ತರಕಾರಿ ಬೀಜ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net