

ಮುಂಬೈ: ಮುಂಬೈನಲ್ಲಿ ತಮಗೆ ಸುರಕ್ಷತೆ ಇಲ್ಲ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ದೂರಿದ್ದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅವರಿಗೆ ವೈಪ್ಲಸ್ ಭದ್ರತೆಯನ್ನು ಒದಿಗಸಲಾಗಿತ್ತು. ಈಗ ಅಮಿತಾಭ್ ಬಚ್ಚನ್ ಅವರ ಮುಂಬೈ ಬಂಗಲೆಗಳಿಗೂ ಪೊಲೀಸ್ ಭದ್ರತೆ ನೀಡಲಾಗಿದೆ.
ಇಷ್ಟಕ್ಕೂ ಭದ್ರತೆ ಕೊಡುವಂತದ್ದೇನಾಗಿದೆ ಎಂಬ ಸಹಜ ಪ್ರಶ್ನೆಯೊಂದು ಬರಬಹುದು. ಅಮಿತಾಭ್ ಆಗಲೀ ಅವರ ಕುಟುಂಬದವರಾಗಲೀ ಏನೂ ಮಾಡಿಲ್ಲ. ಆದರೆ, ಆದರೆ, ಸಮಾಜವಾದಿ ಪಕ್ಷದ ಸಂಸದೆಯಾಗಿರುವ ಜಯಾ ಬಚ್ಚನ್ ಅವರು ಸಂಸತ್ ಅಧಿವೇಶನದಲ್ಲಿ ಆಡಿದ ಕೆಲವು ಮಾತುಗಳಿಂದಾಗಿ ತೊಂದರೆಯಾಗಬಹುದು ಎಂಬ ಕಾರಣಕ್ಕೆ, ಮುಂಬೈನಲ್ಲಿ ಅಮಿತಾಭ್ ಅವರ ಪ್ರತೀಕ್ಷಾ ಮತ್ತು ಜಲ್ಸಾ ಬಂಗಲೆಗಳಿಗೆ ಭದ್ರತೆ ಒದಗಿಸಲಾಗಿದೆ.
ಜಯಾ ಬಚ್ಚನ್ ಅವರು ಮಂಗಳವಾರ ಸಂಸತ್ತಿಲ್ಲಿ ಮಾತನಾಡುವ ಸಂದರ್ಭದಲ್ಲಿ, 'ಸೋಷಿಯಲ್ ಮೀಡಿಯಾದಲ್ಲಿ ಚಿತ್ರರಂಗದವರನ್ನು ಹರಿದು ಮುಕ್ಕುತ್ತಿದ್ದಾರೆ. ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವವರೇ ಗಟಾರ ಎಂದು ಕರೆಯುತ್ತಿದ್ದಾರೆ. ಅಂತಹ ಶಬ್ಧಗಳನ್ನು ಉಪಯೋಗಿಸುವುದಕ್ಕೆ ಬಿಡಬಾರದು. ಯಾರೋ ಒಬ್ಬಿಬ್ಬರು ಮಾಡಿರುವ ತಪ್ಪಿಗೆ ಇಡೀ ಚಿತ್ರರಂಗವನ್ನು ದೂಷಿಸುವುದು ತಪ್ಪು. ನಿನ್ನೆಯಷ್ಟೇ ಚಿತ್ರರಂಗದವರೇ ಆದ ಒಬ್ಬರು, ಚಿತ್ರರಂಗದ ವಿರುದ್ಧ ಮಾತನಾಡಿದರು. ಇದು ನಾಚಿಕೆ ಪಡಬೇಕಾದ ವಿಷಯ' ಎಂದು ಜಯಾ ಹೇಳಿದ್ದರು.
ಜಯಾ ಬಚ್ಚನ್ ಅವರು ಯಾರ ಹೆಸರನ್ನು ನೇರವಾಗಿ ಪ್ರಸ್ತಾಪಿಸದಿದ್ದರೂ, ಅವರು ಕಂಗನಾ ಮತ್ತು ನಟ ಹಾಗೂ ಸಂಸದ ರವಿಕಿಶನ್ ಕುರಿತಾಗಿ ಮಾತನಾಡಿದ್ದು ಸ್ಪಷ್ಟವಾಗಿತ್ತು. ಏಕೆಂದರೆ, ಬಾಲಿವುಡ್ನಲ್ಲಿ ಹೆಚ್ಚುಗತ್ತಿರುವ ಡ್ರಗ್ಸ್ ಮಾಫಿಯಾ ಬಗ್ಗೆ ಇಬ್ಬರೂ ಇತ್ತೀಚೆಗೆ ಮಾತನಾಡಿದ್ದರು. ಅದಕ್ಕೆ ಪ್ರತಿಯಾಗಿ ಜಯಾ ಬಚ್ಚನ್ ಅವರು ಸಂಸತ್ತಿನಲ್ಲಿ ಮಾತನಾಡಿದ್ದರು.
ಇದನ್ನೂ ಓದಿ: ಕೊನೆಗೂ ಜಾಮೀನು ಅರ್ಜಿ ಸಲ್ಲಿಸಿದ ಸಂಜನಾ: ಜೈಲೋ? ಬೇಲೋ?
ಜಯಾ ಅವರು ಮಾತನಾಡಿದ ಕೆಲವೇ ಹೊತ್ತಿನಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಕೆಲವರು ಜಯಾ ಬಚ್ಚನ್ ಮಾತನಾಡಿದ್ದು ಸರಿ ಎಂದರೆ, ಇನ್ನೂ ಕೆಲವರು ಇದು ತಪ್ಪು ಎಂದಿದ್ದರು. ಬಾಲಿವುಡ್ನ ಹಲವು ನಟ-ನಟಿಯರು ಜಯಾ ಅವರಿಗೆ ಬೆನ್ನಿಗೆ ನಿಂತರೆ, ಕಂಗನಾ ಅಭಿಮಾನಿಗಳ ವಿರೋಧ ವ್ಯಕ್ತಪಡಿಸಿದ್ದರು.
ಈ ಎಲ್ಲದರ ಹಿನ್ನೆಲಯಲ್ಲಿ ಮುಂಬೈ ಪೊಲೀಸರು, ಅಮಿತಾಭ್ ಬಚ್ಚನ್ ಕುಟುಂಬದ ಒಡೆತನದಲ್ಲಿರುವ ಎರಡು ಬಂಗಲೆಗಳಿಗೆ ಬುಧವಾರದಿಂದ ಭದ್ರತೆಯನ್ಜು ಒದಗಿಸಿದ್ದಾರೆ.