ಆರ್​.ಆರ್​.ನಗರದಲ್ಲಿ ನ.1ರ ಸಂಜೆಯಿಂದ ನಿಷೇಧಾಜ್ಞೆ ಜಾರಿ

RR Nagar
Published on

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಮತದಾನದ ಹಿನ್ನೆಲೆಯಲ್ಲಿ ನ.1ರ ಸಂಜೆ 6 ಗಂಟೆಯಿಂದ ನ.4ರ ಸಂಜೆ 6 ಗಂಟೆವರೆಗೆ ಕ್ಷೇತ್ರದಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ನಿಷೇಧಾಜ್ಞೆ ವಿಧಿಸಿದ್ದಾರೆ.

ನ.3ರಂದು ಮತದಾನ ನಡೆಯಲಿದೆ. ಶಾಂತಿಯುತ ಮತದಾನದ ಸಲುವಾಗಿ ನಿಷೇಧಾಜ್ಞೆ ಹೊರಡಿಸಿದ್ದು, 5ಕ್ಕಿಂತ ಹೆಚ್ಚಿನ ಜನರು ಗುಂಪು ಸೇರುವಂತಿಲ್ಲ. ಮೆರವಣಿಗೆ, ಪ್ರತಿಭಟನೆ ಮಾಡುವಂತಿಲ್ಲ. ಮಾರಕಾಸ್ತ್ರ ಮತ್ತು ಸ್ಫೋಟಕ ವಸ್ತು ಸಾಗಾಟ, ಪ್ರಚೋದನಕಾರಿ ಭಾಷಣ, ಬ್ಯಾನರ್ ಪ್ರದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ.

ಚುನಾವಣಾ ಆಯೋಗದ ಮಾರ್ಗಸೂಚಿ ಅನ್ವಯ ಮತದಾನದ ಹಿಂದಿನ 48 ಗಂಟೆಗಳ ಅವಧಿಯಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು 10 ಸಂಖ್ಯೆ ಮೀರದಂತೆ ಮನೆ ಮನೆಗೆ ಭೇಟಿ ಕೊಟ್ಟು ಚುನಾವಣಾ ಪ್ರಚಾರ ನಡೆಸಲು ವಿನಾಯಿತಿ ನೀಡಲಾಗಿದೆ.

ಶವಸಂಸ್ಕಾರ, ಮದುವೆ, ಧಾರ್ಮಿಕ ಆಚರಣೆ ನಡೆಸಲು ಹಾಗೂ ದೇವಸ್ಥಾನ, ಚರ್ಚ್ ಮತ್ತು ಮಸೀದಿಗಳಲ್ಲಿ ಪ್ರಾರ್ಥನೆಗೆ ಹಾಗೂ ಪೊಲೀಸರಿಂದ ಅನುಮತಿ ಪಡೆದಿರುವರಿಗೆ ಈ ನಿಷೇಧಾಜ್ಞೆ ಅನ್ವಯಿಸುವುದಿಲ್ಲ ಎಂದು ಆಯುಕ್ತರು ಸ್ಪಷ್ಟಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net