

ನವದೆಹಲಿ: ಕಾಂಗ್ರೆಸ್ನ ಪ್ರತಿಭಟನೆ, ವಿರೋಧದ ನಡುವೆಯೂ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಇಂದೂ ತೀವ್ರ ವಿಚಾರಣೆಗೆ ಒಳಪಡಿಸಿದೆ. ಬೆಳಗಿನಿಂದ ವಿಚಾರಣೆ ಎದುರಿಸುತ್ತಿದ್ದ ರಾಹುಲ್, ಊಟದ ವಿರಾಮದ ಬಳಿಕ ಮತ್ತೆ ಎರಡನೇ ಸುತ್ತಿನ ವಿಚಾರಣೆಗೆ ಹಾಜರಾಗಿದ್ದು, ದಿನವಿಡೀ ಇ.ಡಿ. ಇಕ್ಕಳಕ್ಕೆ ಸಿಕ್ಕಂತಾಗಿದೆ.
ದೆಹಲಿಯ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿನ ಇ.ಡಿ. ಹೆಡ್ ಕ್ವಾರ್ಟರ್ಸ್ಗೆ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಜತೆ ಬೆಳಗ್ಗೆ 11 ಗಂಟೆ ಸುಮಾರಿಗೆ ಆಗಮಿಸಿದ್ದ ರಾಹುಲ್ ಗಾಂಧಿ, ಸುಮಾರು 4 ಗಂಟೆಗಳ ತೀವ್ರ ವಿಚಾರಣೆಗೆ ಒಳಗಾಗಿದ್ದರು.
ಈ ನಡುವೆ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಡಿ.ಕೆ.ಸುರೇಶ್, ದಿನೇಶ್ ಗುಂಡೂರಾವ್ ಮುಂತಾದ ಕಾಂಗ್ರೆಸ್ನ ಹಿರಿಯ ನಾಯಕರು ತೀವ್ರ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ವಶಕ್ಕೆ ಪಡೆದಿದ್ದಾರೆ. ಮತ್ತೊಂದೆಡೆ ಇ.ಡಿ. ವಿಚಾರಣೆ ಎಗ್ಗಿಲ್ಲದೆ ನಡೆದಿದ್ದು, ರಾಹುಲ್ ಗಾಂಧಿಗೆ ಒಂದು ಸಣ್ಣ ವಿರಾಮ ನೀಡಲಾಗಿತ್ತು.
ಮಧ್ಯಾಹ್ನ 3.30ರ ಸುಮಾರಿಗೆ ಊಟದ ವಿರಾಮಕ್ಕೆಂದು ಮನೆಗೆ ಹೊರಟ ರಾಹುಲ್ ಗಾಂಧಿ, ಪುನಃ 4.30ರ ಸುಮಾರಿಗೆ ಇ.ಡಿ. ಕಚೇರಿಗೆ ತಮ್ಮ ವಕೀಲರೊಂದಿಗೆ ಮರಳಿದ್ದು, ಅವರನ್ನು ಮತ್ತೊಂದು ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿದೆ. ಇ.ಡಿ. ಅಧಿಕಾರಿಗಳು ಅವರನ್ನು ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದು, ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ಇನ್ನೂ ಮುಂದುವರಿದಿದ್ದು, ಆ ಕುರಿತು ಖಚಿತ ಮಾಹಿತಿ ನಿಖರವಾಗಿ ಇನ್ನು ಕೆಲವೇ ಕ್ಷಣಗಳಲ್ಲಿ ಹೊರಬೀಳುವ ಸಾಧ್ಯತೆ ಇದೆ.