ರೈತರು, ಕಾರ್ಮಿಕರಿಗೆ ಕೇಂದ್ರದಿಂದ ಎರಡನೇ ದಿನದ ಕೊಡುಗೆ: ಯಡಿಯೂರಪ್ಪ ಏನಂತಾರೆ?

Yeddyurappa bsy 1 vvani
Published on

ಬೆಂಗಳೂರು: ಸ್ವಾವಲಂಬಿ ಭಾರತ ಆರ್ಥಿಕ ಪುನಶ್ಚೇತನ ಯೋಜನೆಯ ಅಂಗವಾಗಿ ಗುರುವಾರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಾಡಿದ ಘೋಷಣೆಗಳ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರಿಗೆ ಬಡವರ ಬಗ್ಗೆ ಇರುವ ಕಾಳಜಿಯನ್ನು ಈ ಘೋಷಣೆಗಳು ಬಿಂಬಿಸುತ್ತವೆ. ವಲಸೆ ಕಾರ್ಮಿಕರು, ಬೀದಿ ಬದಿ ವ್ಯಾಪಾರಿಗಳು, ಸಣ್ಣ ರೈತರು, ಕೂಲಿ ಕಾರ್ಮಿಕರು ಮೊದಲಾದ ಎಲ್ಲ ಸಮುದಾಯಗಳಿಗೆ ಮೂಲಸೌಲಭ್ಯ ಮತ್ತು ಉದ್ಯೋಗ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳು ಶ್ಲಾಘನೀಯ ಎಂದು ಹೇಳಿದ್ದಾರೆ.

ರಾಜ್ಯ ಮತ್ತು ಪ್ರಾಂತೀಯ ವಲಯದಲ್ಲಿ ಇರುವ ಕನಿಷ್ಠ ವೇತನ ತಾರತಮ್ಯವನ್ನು ತೆಗೆದು ಹಾಕುವುದು ಊರುಗಳಿಗೆ ಹಿಂದಿರುಗಿದ ವಲಸೆ ಕಾರ್ಮಿಕರಿಗೆ ವರದಾನವಾಗಲಿದೆ. ಕೋಟಿ ವಲಸಿಗ ಕಾರ್ಮಿಕರಿಗೆ ಪಡಿತರ ಚೀಟಿ ಇಲ್ಲದಿದ್ದರೂ 3500 ಕೋಟಿ ರೂ. ವೆಚ್ಚದಲ್ಲಿ ಉಚಿತ ಪಡಿತರ ವಿತರಣೆ, ವಲಸೆ ಕಾರ್ಮಿಕರಿಗೆ ಮನೆ ಬಾಡಿಗೆ ದರ ನಿಗದಿ ಮೊದಲಾದ ಕ್ರಮಗಳು ಅವರಿಗೆ ಹೆಚ್ಚಿನ ಭದ್ರತೆಯನ್ನು ನೀಡಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುದ್ರಾ ಶಿಶು ಸಾಲ ಯೋಜನೆಗೆ ಬಡ್ಡಿ ರಿಯಾಯಿತಿ, ಬೀದಿ ಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ವರೆಗೆ ವಿಶೇಷ ಸಾಲ ಸೌಲಭ್ಯ ಒದಗಿಸಲು 5 ಸಾವಿರ ಕೋಟಿ ಅನುದಾನ ನಿಗದಿ ಪಡಿಸಿರುವುದು ಬೀದಿ ಬದಿ ವ್ಯಾಪಾರಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಮಧ್ಯಮ, ಕೆಳ ಮಧ್ಯಮ ವರ್ಗದವರಿಗೆ ಗೃಹ ಸಾಲ ಸಬ್ಸಿಡಿ ಯೋಜನೆಗೆ 70 ಸಾವಿರ ಕೋಟಿ ರೂ. ನೆರವು ಈ ವರ್ಗದ ಜನರ ಕನಸು ಸಾಕಾರಗೊಳಿಸಲು ನೆರವಾಗಲಿದೆ ಎಂದು ಶ್ಲಾಘಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net